ಲಂಡನ್:ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ದ.ಆಫ್ರಿಕಾಗೆ ನಾಳೆ ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನವೇ ಧೋನಿ ಹಾಗೂ ನಾಯಕ ಕೊಹ್ಲಿಯ ಆಟದ ಬಗ್ಗೆ ನಡುಕ ಶುರುವಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹಾಗು ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಹರಿಣ ಪಡೆ ಸೋಲನುಭವಿಸಿತ್ತು. ಈ ಎರಡು ಪಂದ್ಯಗಳಲ್ಲೂ 300ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಅಫ್ರಿಕಾಗೆ ಪಂದ್ಯಕ್ಕೂ ಮೊದಲೇ ಧೋನಿ ಹಾಗೂ ರನ್ಮಷಿನ್ ಕೊಹ್ಲಿ ಬಗ್ಗೆ ತಲೆನೋವು ಆರಂಭವಾಗಿದೆ.
ದ.ಆಫ್ರಿಕಾ ಆಲ್ರೌಂಡರ್ ಜೆಪಿ ಡುಮಿನಿ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಮಾದ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಭಾರತ ಕಳೆದ ಕೆಲವು ವರ್ಷಗಳಿಂದ ಅನೇಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಸ್ಪಿನ್ನರ್ಸ್ ಜೊತೆಗೆ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಬೂಮ್ರಾ, ಅತ್ಯುತ್ತಮ ಫಾರ್ಮ್ನಲ್ಲಿರುವುದು ಎದುರಾಳಿಗೆ ಸಾಮಾನ್ಯವಾಗೇ ಆತಂಕ ತರಿಸುತ್ತದೆ ಎಂದಿದ್ದಾರೆ.
ಅತ್ಯುತ್ತಮ ಬ್ಯಾಟಿಂಗ್ ಲೈನಪ್ ಹೊಂದಿರುವ ಟೀಮ್ ಇಂಡಿಯಾದಲ್ಲಿ ಕೊಹ್ಲಿಯಂಥ ವಿಶ್ವಶ್ರೇಷ್ಟ ಬ್ಯಾಟ್ಸ್‌ಮನ್ ಹಾಗು ಅನುಭವಿ ಮ್ಯಾಚ್ ಫಿನಿಶರ್ ಧೋನಿ ಎದುರಾಳಿಗಳಿಗೆ ಭಯ ತರಿಸುವ ಆಟಗಾರರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಆದರೆ, ಕೇವಲ ಒಂದು ಪ್ರದರ್ಶನ ನಮ್ಮಲ್ಲಿ ಆತ್ಮವಿಶ್ವಾಸ ತುಂಬಲಿದೆ. ಬಾಂಗ್ಲಾದೇಶದ ವಿರುದ್ದ ನಮ್ಮ ಪ್ರದರ್ಶನ ತೀರಾ ಕಳಪೆಯಾಗಿರಲಿಲ್ಲ. ಕೆಲವು ಬ್ಯಾಟ್ಸ್ಮನ್ಗಳು ಫಿನಿಶಿಂಗ್ ಹಂತದಲ್ಲಿ ವಿಕೆಟ್ ನೀಡಿದ್ದು ಸೋಲಿಗೆ ಕಾರಣವಾಯಿತು ಎಂದು ಹೇಳುತ್ತಾ ಡುಮಿನಿ, ವಿಶ್ವಕಪ್ ಅಭಿಯಾನದಲ್ಲಿ ಮತ್ತೆ ಪುಟಿದೇಳುವ ಭರವಸೆ ವ್ಯಕ್ತಪಡಿಸಿದ್ದಾರೆ.