ಮುಂಬೈ (ಮಹಾರಾಷ್ಟ್ರ):21 ವರ್ಷದ ಯೂಟ್ಯೂಬರ್ ಮನೆಯ ಸಿಸಿಟಿವಿ ಹ್ಯಾಕ್ ಮಾಡಿರುವ ದುಷ್ಕರ್ಮಿ, ಅಶ್ಲೀಲ ವಿಡಿಯೋವನ್ನು ಶೇರ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಯೂಟ್ಯೂಬರ್ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಹ್ಯಾಕರ್ನ ಬಂಧನಕ್ಕೆ ಬಲೆ ಬೀಸಿದ್ದಾರೆ.
"ಮುಂಬೈ ಮೂಲದ ಯೂಟ್ಯೂಬರ್ ಮನೆಯಲ್ಲಿದ್ದ ಸಿಸಿಟಿವಿ ಹ್ಯಾಕ್ ಮಾಡಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಸದ್ಯ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ" ಎಂದು ಮುಂಬೈನ ಉಪ ಪೊಲೀಸ್ ಆಯುಕ್ತ ರಾಜ್ ತಿಲಕ್ ರೋಷನ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಮುಂಬೈ ಮೂಲದ 21 ವರ್ಷದ ಯೂಟ್ಯೂಬರ್ ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಅವರಿಗೆ ತಿಳಿಯದಂತೆ ಯಾರೋ ಅಪರಿಚಿತರು ಸಿಸಿಟಿವಿ ಹ್ಯಾಕ್ ಮಾಡಿದ್ದಾರೆ. ಬಳಿಕ ನವೆಂಬರ್ 17ರಂದು ಯೂಟ್ಯೂಬರ್ನ ಅಶ್ಲೀಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಯೂಟ್ಯೂಬರ್ನ ಸ್ನೇಹಿತರು ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಯೂಟ್ಯೂಬರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.
'ಸೈಬರ್ ತಂಡವು ತಾಂತ್ರಿಕ ಸಹಾಯದಿಂದ ಅಪ್ಲೋಡ್ ಮಾಡಿದವರ ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು ಕಂಡು ಹಿಡಿಯುತ್ತಿದೆ. ಜೊತೆಗೆ ಸೋಷಿಯಲ್ ಮೀಡಿಯಾ ವೇದಿಕೆಯಿಂದ ಈ ವಿಡಿಯೋ ತೆಗೆದು ಹಾಕುವಂತೆ ವಿನಂತಿಸಲಾಗಿದೆ. ಸಿಸಿಟಿವಿಯಲ್ಲಿನ ವಿವರಗಳನ್ನು ಅಕ್ರಮವಾಗಿ ಹೇಗೆ ಪಡೆದುಕೊಳ್ಳುತ್ತಾರೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ' ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.