ಭಾರತದ ಸ್ವಾತಂತ್ರ್ಯದ ನಂತರದ ತಿಂಗಳುಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಯುವಕ ಮಕ್ಬೂಲ್ ಶೆರ್ವಾನಿ ಈ ಪ್ರದೇಶವನ್ನು ಸ್ವತಂತ್ರ ಭಾರತದೊಂದಿಗೆ ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
1947ರಲ್ಲಿ ಪಾಕಿಸ್ತಾನದಿಂದ ಬಂದ ಬುಡಕಟ್ಟು ಆಕ್ರಮಣಕಾರರು ಕಾಶ್ಮೀರಕ್ಕೆ ಕಾಲಿಟ್ಟಾಗ, ಇಪ್ಪತ್ತೆರಡು ವರ್ಷದ ಮಕ್ಬೂಲ್ ಶೆರ್ವಾನಿ, ಶ್ರೀನಗರ ವಿಮಾನ ನಿಲ್ದಾಣದ ಕಡೆಗೆ ಅವರ ಮುನ್ನಡೆ ವಿಳಂಬಗೊಳಿಸಿದರು. ಹೀಗಾಗಿ ಭಾರತೀಯ ಸೇನೆಗೆ ವಿಮಾನ ನಿಲ್ದಾಣದಲ್ಲಿ ಇಳಿಯಲು ಮತ್ತು ತಮ್ಮ ಪ್ರತಿದಾಳಿಯನ್ನು ಪ್ರಾರಂಭಿಸಲು ಅಮೂಲ್ಯ ಸಮಯ ದೊರೆಯಿತು.
ಭೂಮಿಯ ಮೇಲಿನ ಸ್ವರ್ಗ ಉಳಿಸಿಕೊಂಡ ಯುವಕನ ಸಾಹಸಗಾಥೆ ಅಕ್ಟೋಬರ್ 22, 1947 ರಂದು ಪಾಕಿಸ್ತಾನದ ಬುಡಕಟ್ಟು ಜನರು ಗಡಿಯನ್ನು ದಾಟಿ ಕಾಶ್ಮೀರವನ್ನು ಆಕ್ರಮಿಸಿದರು. ಸ್ವಲ್ಪ ಸಮಯದ ನಂತರ, ಕಾಶ್ಮೀರದ ಮಹಾರಾಜ ಹರಿ ಸಿಂಗ್ ಶ್ರೀನಗರದಿಂದ ಪಲಾಯನ ಮಾಡಿ ಜಮ್ಮುವಿಗೆ ಬಂದು ಭಾರತೀಯ ಸೇನೆಯ ನೆರವು ಕೋರಿದರು.
ಅಕ್ಟೋಬರ್ 26 ರಂದು, ಮಹಾರಾಜರು ಭಾರತದೊಂದಿಗೆ ಸೇರ್ಪಡೆಯ ಒಪ್ಪಂದಕ್ಕೆ ಸಹಿ ಹಾಕಿದರು. ಶೀಘ್ರದಲ್ಲೇ ಭಾರತೀಯ ಸೇನೆಯು ಪಾಕಿಸ್ತಾನಿ ಬುಡಕಟ್ಟು ಸಮುದಾಯದವರು ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿತು ಮತ್ತು ಸುದೀರ್ಘ ಯುದ್ಧದ ನಂತರ ಅವರು ಹಿನ್ನಡೆದರು.
1947 ರ ಘಟನೆಗಳಲ್ಲಿ ಮಕ್ಬೂಲ್ ಶೆರ್ವಾನಿಯನ್ನು ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಸೈನ್ಯವು ಅವನ ಹೆಸರಿನಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿದೆ. ಆದಾಗ್ಯೂ, 22 ವರ್ಷದ ಶೆರ್ವಾನಿ ನಂತರ ಬುಡಕಟ್ಟು ಜನಾಂಗದವರಿಂದ ಕೊಲ್ಲಲ್ಪಟ್ಟರು.
ಇಂದು ಕಾಶ್ಮೀರಿಗಳು ಈ ಬುಡಕಟ್ಟು ಜನಾಂಗದವರ ದಾಳಿಯನ್ನು ನೆನಪಿಸಿಕೊಂಡಾಗ, ಬಾರಾಮುಲ್ಲಾದ 22 ವರ್ಷದ ಮಕ್ಬೂಲ್ ಶೆರ್ವಾನಿ ಕೂಡ ನೆನಪಿಸಿಕೊಳ್ಳುತ್ತಾರೆ. ಮಕ್ಬೂಲ್ ಶೇರ್ವಾನಿ ಭಾರತೀಯ ಸೇನೆಗೆ ಸಹಾಯ ಮಾಡುವ ಮೂಲಕ ದಾಳಿಯನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದರು. ಅವರ ತ್ಯಾಗ ಸ್ಮರಿಸುತ್ತಾ, ಅಕ್ಟೋಬರ್ 22 ರಂದು ಶೇರ್ವಾನಿ ದಿನವನ್ನು ಆಚರಿಸಲಾಗುತ್ತದೆ ಮತ್ತು ಬಾರಾಮುಲ್ಲಾದ ಶೇರ್ವಾನಿ ಹಾಲ್‌ಗೆ ಅವರ ಹೆಸರನ್ನು ಇಡಲಾಗಿದೆ.