ಕರ್ನಾಟಕ

karnataka

ETV Bharat / bharat

ರಾಜಸ್ಥಾನದಲ್ಲಿ ವ್ಯಕ್ತಿಯ ಶಿರಚ್ಚೇದಿಸಿ, ಪ್ರಧಾನಿಗೆ ಬೆದರಿಕೆ ಹಾಕಿದ್ದ ಹಂತಕರ ಬಂಧನ; ಉದಯಪುರದಲ್ಲಿ ನಿಷೇಧಾಜ್ಞೆ - ರಾಜಸ್ಥಾನದಲ್ಲಿ ವ್ಯಕ್ತಿಯ ಶಿರಚ್ಚೇದ

ನೂಪುರ್ ಶರ್ಮಾ ಪರವಾಗಿ ಪೋಸ್ಟ್​ ಮಾಡಿದ್ದಕ್ಕೆ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬನ ಶಿರಚ್ಚೇದ ಮಾಡಲಾಗಿದೆ. ಇದು ಭಾರಿ ಪ್ರತಿಭಟನೆಗೆ ಕಾರಣವಾಗಿದೆ.

ನೂಪುರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದ ವ್ಯಕ್ತಿಯ ಶಿರಚ್ಚೇದ
ನೂಪುರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದ ವ್ಯಕ್ತಿಯ ಶಿರಚ್ಚೇದ

By

Published : Jun 28, 2022, 6:54 PM IST

Updated : Jun 29, 2022, 1:37 PM IST

ಉದಯಪುರ:ಪ್ರವಾದಿ ಮಹಮ್ಮದ್‌ರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪರವಾಗಿ ಪೋಸ್ಟ್​ ಹಾಕಿದ್ದ ವ್ಯಕ್ತಿಯ ಶಿರಚ್ಚೇದ ಮಾಡಿ, ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಹಾಕಿದ ಘಟನೆ ರಾಜಸ್ಥಾನದ ಉದಯಪುರದಲ್ಲಿ ಇಂದು ನಡೆದಿದೆ. ಘಟನೆಯ ಬಳಿಕ ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, 144 ಸೆಕ್ಷನ್​ ಜಾರಿ ಮಾಡಲಾಗಿದೆ. ಅಲ್ಲದೇ ಸಂಜೆ ವೇಳೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಗೌಸ್‌ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಎಂದು ಗುರುತಿಸಲಾಗಿದೆ. ಉದಯಪುರ ನಗರದ ಮಾಲ್ದಾಸ್​ ಬೀದಿಯಲ್ಲಿ ದರ್ಜಿ ಅಂಗಡಿ ನಡೆಸುತ್ತಿದ್ದ ಕನ್ಹಯ್ಯಾ ಲಾಲ್ ಸಾಹು ಕೊಲೆಯಾದ ವ್ಯಕ್ತಿ. ಇವರು ಕೆಲ ದಿನಗಳ ಹಿಂದೆ ನೂಪುರ್​ ಶರ್ಮಾ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು.

ಭಾರೀ ಪ್ರಮಾಣದಲ್ಲಿ ಜಮಾಯಿಸಿ ಪ್ರತಿಭಟನೆಗಿಳಿದ ಜನರು

ಘಟನೆ ಏನು?:ಪೈಗಂಬರರ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್​ ಶರ್ಮಾರ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ನಗರದ ದರ್ಜಿ ಅಂಗಡಿ ನಡೆಸುತ್ತಿದ್ದ ಕನ್ಹಯ್ಯಾ ಲಾಲ್​ ಎಂಬುವವರು ಶರ್ಮಾ ಪರವಾಗಿ ಪೋಸ್ಟ್​ ಮಾಡಿದ್ದರು. ಈ ಬಗ್ಗೆ ಮುಸ್ಲಿಂ ಯುವಕರು ಕನ್ಹಯ್ಯಾಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದರು. ಇದರಿಂದ ಹೆದರಿದ ಆತ ಕೆಲ ದಿನಗಳ ಕಾಲ ಅಂಗಡಿಯನ್ನು ಮುಚ್ಚಿದ್ದರು. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇಂದು ಅಂಗಡಿಯನ್ನು ತೆರೆದಾಗ ಬಟ್ಟೆ ಹೊಲಿಸಿಕೊಳ್ಳುವ ನೆಪದಲ್ಲಿ ಬಂದ ಮುಸ್ಲಿಂ ಯುವಕರು ಅಳತೆ ಪಡೆಯುತ್ತಿದ್ದಾಗ ಕನ್ಹಯ್ಯಾರ ಶಿರಚ್ಚೇದನ ಮಾಡಿ ಅಲ್ಲಿಂದ ಪರಾರಿಯಾದರು. ಇದು ಉದಯಪುರದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ವ್ಯಾಪಾರಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಧಾನಿಗೆ ಬೆದರಿಕೆ:ದರ್ಜಿಯನ್ನು ಕೊಲೆಗೈದ ಬಳಿಕ ವಿಡಿಯೋ ಹರಿಬಿಟ್ಟ ಹಂತಕರು ಒಂದು ಸಮುದಾಯವನ್ನು ಹೀಯಾಳಿಸಿದವರಿಗೆ ಇದೇ ಗತಿಯಾಗಲಿದೆ. ದೇಶದಲ್ಲಿ ಈಗಿನ ಪರಿಸ್ಥಿತಿ ಹೀಗೇ ಮುಂದುವರಿದರೆ, ಪ್ರಧಾನಿ ಮೋದಿಗೂ ಈ ಸ್ಥಿತಿ ತಪ್ಪಿದ್ದಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು.

ಭಾರಿ ಪ್ರತಿಭಟನೆ:ನಗರದಲ್ಲಿ ವ್ಯಕ್ತಿಯ ಕೊಲೆ ಬೆನ್ನಲ್ಲೇ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ರಸ್ತೆಯಲ್ಲಿ ಟಯರ್​ಗಳನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇಂಟರ್ನೆಟ್​ ಬಂದ್​:ನಗರದಲ್ಲಿಉದ್ವಿಗ್ನ ಪರಿಸ್ಥಿತಿ ಉಂಟಾದ ಬಳಿಕ ಮುಂದಿನ 24 ಗಂಟೆಗಳ ಕಾಲ ಇಂಟರ್ನೆಟ್​ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

'ಇದು ಆಘಾತಕಾರಿ ಘಟನೆ'- ರಾಜಸ್ಥಾನ ಸಿಎಂ:"ವ್ಯಕ್ತಿಯ ಶಿರಚ್ಚೇದ ಘಟನೆ ಆಘಾತಕಾರಿಯಾದುದು. ಊಹೆಗೂ ನಿಲುಕದ್ದಾಗಿದೆ. ತಪ್ಪಿತಸ್ಥರನ್ನು ಬಿಡುವುದಿಲ್ಲ. ಇದು ಅತ್ಯಂತ ದುಃಖಕರವಾದ ಘಟನೆಯಾಗಿದೆ" ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.

"ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಶಾಂತಿ ಕಾಪಾಡಲು ದೇಶವನ್ನುದ್ದೇಶಿಸಿ ಏಕೆ ಮಾತನಾಡುವುದಿಲ್ಲ?. ಜನರಲ್ಲಿ ಪರಸ್ಪರ ಉದ್ವಿಗ್ನತೆ ಇದೆ. ಪ್ರಧಾನಿ ಈ ಬಗ್ಗೆ ಮಾತನಾಡಿ ಇಂತಹ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಹೇಳಬೇಕು. ಶಾಂತಿಗಾಗಿ ಮನವಿ ಮಾಡಬೇಕು" ಎಂದರು.

"ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಾನು ಎಲ್ಲರಿಗೂ ಮನವಿ ಮಾಡುತ್ತೇವೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡಲಾಗುವುದು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಜಂಗಲ್ ರಾಜ್ ಆಡಳಿತ- ಬಿಜೆಪಿ:ರಾಜಸ್ಥಾನದಲ್ಲಿ ಜಂಗಲ್​ರಾಜ್​ ಆಡಳಿತವಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು ಘಟನೆ ಕುರಿತು ಬಿಜೆಪಿ ಟೀಕಿಸಿದೆ.

ಉದಯಪುರದಲ್ಲಿ ಅಮಾಯಕನೊಬ್ಬನ ಬರ್ಬರ ಹತ್ಯೆ ಮಾಡಲಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಜಂಗಲ್ ರಾಜ್ ನಡೆಸುತ್ತಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ಆಡಳಿತ ಒಂದು ಕೋಮುವನ್ನು ಸಮಾಧಾನಪಡಿಸಲು ಮುಂದಾದಾಗ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಟ್ವೀಟ್ ಮಾಡಿದ್ದಾರೆ.

ಒವೈಸಿ ಖಂಡನೆ:ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಇದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಉದಯಪುರದಲ್ಲಿ ನಡೆದ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಟ್ವೀಟ್​ ಮಾಡಿದ್ದಾರೆ.

ಹತ್ಯೆಕೋರರ ಬಂಧನ:ವ್ಯಕ್ತಿಯ ಶಿರಚ್ಚೇದ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಸಿಎಂ ಅಶೋಕ್​ ಗೆಹ್ಲೋಟ್​, ಇಬ್ಬರು ಹತ್ಯೆಕೋರರನ್ನು ಬಂಧಿಸಲಾಗದೆ. ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಘಟನೆಯ ಬಳಿಕ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪರಿಸ್ಥಿತಿ ಹತೋಟಿಗೆ ಪಡೆಯಲು ಉದಯಪುರದ ಹಲವೆಡೆ 44 ಸೆಕ್ಷನ್​ ಜಾರಿ ಮಾಡಿ ಕರ್ಫ್ಯೂ ಹೇರಲಾಗಿದೆ.

ಇದನ್ನೂ ಓದಿ:ಮದುವೆಯಾಗಿ 3 ತಿಂಗಳಾದ್ರೂ ಮನೆಗೆ ಬಾರದ ಪತ್ನಿ: ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಪತಿ

Last Updated : Jun 29, 2022, 1:37 PM IST

ABOUT THE AUTHOR

...view details