ಎರ್ನಾಕುಲಂ(ಕೇರಳ):ತಂದೆಯ ಜೀವ ಉಳಿಸುವ ಸಲುವಾಗಿ ಕಾನೂನು ಹೋರಾಟ ಮಾಡಿ ವಿಜಯ ಸಾಧಿಸಿದ ಅಪ್ರಾಪ್ತ ವಯಸ್ಸಿನ ಮಗಳು ತನ್ನ ಯಕೃತ್ನ ಭಾಗವನ್ನು ದಾನವಾಗಿ ನೀಡಿ ಮಾದರಿಯಾಗಿರುವ ಘಟನೆ ನೆರೆಯ ಕೇರಳದಲ್ಲಿ ನಡೆದಿದೆ. ತ್ರಿಶೂರ್ನ 17 ವರ್ಷದ ಬಾಲಕಿ ದೇವಾನಂದ ಇದೀಗ ಅನೇಕರಿಗೆ ಮಾದರಿ ಮತ್ತು ಸ್ಫೂರ್ತಿಯಾಗಿದ್ದಾಳೆ.
ಹೌದು, ದೇವಾನಂದಾ ತಂದೆ ಪಿಜಿ ಪ್ರತೀಶ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರು. ತಂದೆಯ ಯಕೃತ್ ಹಾನಿಯಾದ ಹಿನ್ನೆಲೆ ಅವರಿಗೆ ತನ್ನ ಯಕೃತ್ನ ಒಂದು ಭಾಗ ನೀಡಲು ದೇವಾನಂದ ಮುಂದಾಗಿದ್ದಾಳೆ. ಆಕೆಯ ವೈದ್ಯಕೀಯ ವರದಿಗಳು ತಂದೆಯ ಈ ಯಕೃತ್ ಚಿಕಿತ್ಸೆಗೆ ಹೊಂದಿಕೆ ಆಗಿತ್ತು. ಆದರೆ, ಆಕೆ ಅಪ್ರಾಪ್ತ ವಯಸ್ಕಳು ಎಂಬ ಕಾರಣಕ್ಕೆ ಕಾನೂನು ತೊಡಕು ಉಂಟಾಗಿತ್ತು. ಅಪ್ರಾಪ್ತರು ಅಂಗಾಂಗ ದಾನಕ್ಕೆ ಕಾನೂನು ಸಮ್ಮತಿ ನೀಡದ ಕಾರಣ ಈ ಸಂಬಂಧ ದೀರ್ಘ ಕಾನೂನು ಹೋರಾಟ ನಡೆಸಿದ್ದಳು. ಈಕೆಯ ಮನವಿ ಆಲಿಸಿದ ನ್ಯಾಯಾಲಯ ಕೂಡ ಒಪ್ಪಿಗೆ ಸೂಚಿಸಿದ್ದು, ಇದೀಗ ಇಲ್ಲಿನ ಅಲುವ ರಾಜಗಿರಿ ಆಸ್ಪತ್ರೆಯಲ್ಲಿ ತಂದೆ ಮತ್ತು ಮಗಳ ಯಶಸ್ವಿ ಯಕೃತ್ ಕಸಿ ಚಿಕಿತ್ಸೆ ನಡೆಸಲಾಗಿದೆ. ಇದೀಗ ದೇಶದಲ್ಲಿಯೇ ಕಿರಿಯ ವಯಸ್ಸಿನಲ್ಲಿ ಅಂಗಾಂಗ ದಾನ ಮಾಡಿದ ದಾಖಲೆಯನ್ನು ಆಕೆ ಮಾಡಿದ್ದಾಳೆ.
ಶಸ್ತ್ರ ಚಿಕಿತ್ಸೆಗಾಗಿ 9 ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ದೇವಾನಂದ ಇದೀಗ ಗುಣಮುಖಳಾಗಿದ್ದಾಳೆ. ಇಲ್ಲಿನ ತಜ್ಞ ವೈದ್ಯರ ತಂಡವಾದ ಡಾ ರಾಮಚಂದ್ರ ನಾರಾಯಣ ಮೆನನ್, ಡಾ. ಜಾನ್ ಶಾಜಿ ಮ್ಯಾಥ್ಯು, ಜೋಸೆಫ್ ಜಾರ್ಗ್, ಸಿರಿಕ್ ಅಬೆ ಪಿಲಿಪ್, ಜಾರ್ಜ್ ಜಾಕೋಬ್, ಶಾಲಿನಿ ರಾಮಕೃಷ್ಣನ್ ಮತ್ತು ಜಯಶಂಕರ್ ಯಶಸ್ವಿಯಾಗಿ ಈ ಯಕೃತ್ ಕಸಿ ಚಿಕಿತ್ಸೆ ನಡೆಸಿದ್ದಾರೆ.
ಚಿಕಿತ್ಸೆ ವೆಚ್ಚ ಭರಿಸಿದ ಆಸ್ಪತ್ರೆ: ಇನ್ನು, ಸಣ್ಣ ವಯಸ್ಸಿನಲ್ಲೇ ತಂದೆ ಜೀವ ಉಳಿಸಿಕೊಳ್ಳಲು ಮುಂದಾಗಿರುವ ದೇವಾನಂದಾ ಅವರ ದಿಟ್ಟತನಕ್ಕೆ ಮೆಚ್ಚಿದ ರಾಜಗಿರಿ ಆಸ್ಪತ್ರೆಯ ಆಡಳಿತ ಮಂಡಳಿ ಶಸ್ತ್ರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರೋಗಿಗಳ ಬದಲಾಗಿ ತಾವೇ ಭರಿಸಲು ಮುಂದಾಗಿದೆ. ಆಸ್ಪತ್ರೆಯ ಈ ನಿರ್ಧಾರದಿಂದ ಮಧ್ಯಮ ವರ್ಗ ದೇವಾನಂದ ಕುಟುಂಬಕ್ಕೆ ಕೂಡ ದೊಡ್ಡ ಸಹಾಯವಾಗಿದೆ. ದೇವಾನಂದ ತ್ರಿಸ್ಸೂರ್ನ ಸೆಕ್ರೇಡ್ ಹಾರ್ಟ್ ಕಾನ್ವೆಂಟ್ನಲ್ಲಿ ಪ್ಲಸ್ 2 ಓದುತ್ತಿದ್ದು, ಇದೀಗ ಮಾರ್ಚ್ನಲ್ಲಿ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದಾಳೆ. ಈಕೆಯ ತಂದೆ 48 ವರ್ಷದ ಪ್ರತೀಶ್, ತ್ರಿಶೂರ್ನಲ್ಲಿ ಕಾಫಿ ಅಂಗಡಿ ನಡೆಸುತ್ತಾರೆ. ಯಕೃತ್ ಸಮಸ್ಯೆ ಜೊತೆಗೆ ಕ್ಯಾನ್ಸರ್ ಲೆಸಿಯಾನ್ ಸಮಸ್ಯೆಗೆ ಒಳಗಾಗಿದ್ದ ಅವರ ಪ್ರಾಣ ಉಳಿಸಲು ಯಕೃತ್ ಕಸಿ ಒಂದೇ ಮಾರ್ಗವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ತಂದೆಗಾಗಿ ಹೋರಾಟ:ಇಂಡಿಯನ್ ಟ್ರಾನ್ಸ್ಪ್ಲಾನೆಂಟೇಷನ್ ಆಫ್ ಹ್ಯೂಮನ್ ಅರ್ಗ್ ಆ್ಯಕ್ಟ್ 1994ರ ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ. ಈ ಹಿನ್ನೆಲೆ ಪ್ರತೀಶ್ ಅವರಿಗೆ ಹೊಂದಿಕೆಯಾಗುವಂತಹ ಯಕೃತ್ಗಾಗಿ ಕುಟುಂಬ ಹುಡುಕಾಟ ನಡೆಸಿದರೂ ಅವರಿಗೆ ಎಲ್ಲೂ ಸಿಕ್ಕಿರಲಿಲ್ಲ. ಕೊನೆಗೆ ದೇವಾನಂದ ತಂದೆಗೆ ಯಕೃತ್ ದಾನ ಮಾಡಲು ಮುಂದಾದಳು. 17ವರ್ಷ ಬಾಲಕಿ ತಂದೆ ಜೀವ ಉಳಿಸಲು ಅನೇಕ ಕಷ್ಟ ಎದುರಿಸಿದಳು. ಇದಕ್ಕಾಗಿ ಕಾನೂನು ಹೋರಾಟ ನಡೆಸಿದಳು. ಜೊತೆಗೆ ಆರೋಗ್ಯಯುತ ಜೀವನ ಶೈಲಿ ಕಾಪಾಡಿಕೊಳ್ಳಲು ಜಿಮ್ಗೆ ಸೇರಿದಳು. ದೇವಾನಂದಾ ಅರ್ಜಿ ಆಲಿಸಲು ಮುಂದಾದ ಹೈಕೋರ್ಟ್, ಆಕೆಯ ವೈದ್ಯಕೀಯ ವರದಿ ಮತ್ತು ದಾಖಲೆಗಳ ವೀಕ್ಷಣೆಗೆ ವೈದ್ಯಕೀಯ ಮಂಡಳಿ ನೇಮಿಸಿತು. ವಯೋಮಿತಿ ಪರಿಗಣನೆ ನಡೆಸದೇ ತಂದೆ ಜೀವ ಉಳಿಸಲು ಅಂಗಾಂಗ ದಾನ ಮಾಡುವ ದೇವಾನಂದ ನಿರ್ಧಾರಕ್ಕೆ ಕೋರ್ಟ್ ಸಮ್ಮತಿ ನೀಡಿತು.
ಇದನ್ನೂ ಓದಿ: ಇಂದು ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನೆರವೇರಲಿದೆ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ