ಕೋಲ್ಕತ್ತಾ (ಪಶ್ಚಿಮ ಬಂಗಾಳ):ಉತ್ತರ 24 ಪರಗಣದ ಅಶೋಕ್ ನಗರ ಪ್ರದೇಶದಲ್ಲಿ ಖಾಲಿ ಮನೆಗೆ ಕರೆದೊಯ್ದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಭಾನುವಾರ ರಾತ್ರಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಕೋಲ್ಕತ್ತಾದ ಬಾರ್‌ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ರಾತ್ರಿ, ನಾಲ್ವರು ಯುವಕರು ಆಕೆಯನ್ನು ಖಾಲಿ ಫ್ಲಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆಯನ್ನು ರಸ್ತೆಬದಿಯಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ನಂತರ ಅಶೋಕ್ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತನ್ಮಯ್ ಪಾಲ್, ಆಕಾಶ್ ಚಕ್ರವರ್ತಿ, ತುಕೈ ಸಿಕ್ದರ್ ಮತ್ತು ಗೋಪಾಲ್ ಪಾಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಬಂಧಿತರು ಅಶೋಕ್ ನಗರ ಸುಭಾಷ್ ಪಲ್ಲಿಯ ನಿವಾಸಿಗಳಾಗಿದ್ದಾರೆ.
ಪೊಲೀಸರು ಹೇಳಿದ್ದೇನು?:ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ ರಾತ್ರಿ ಅಶೋಕ್ ನಗರ ಪ್ರದೇಶದ ಜೆಸ್ಸೋರ್ ರಸ್ತೆಯ ಬದಿಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಬಳಿಕೆ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತೀಚೆಗಷ್ಟೇ ತನಗೆ ವೈಯಕ್ತಿಕ ಸಮಸ್ಯೆ ಇದ್ದು, ಅದಕ್ಕೆ ಹಣದ ಅವಶ್ಯಕತೆ ಇದೆ ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಭಾನುವಾರ ಮಧ್ಯಾಹ್ನ, ಆಕೆಯ ಪರಿಚಯಸ್ಥನಾದ ಆಕಾಶ್ ವಾಕಿಂಗ್ ಹೋಗೋಣವೆಂದು ಹೇಳಿದ್ದ ಮತ್ತು ಹಣದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದನು. ಹೀಗಾಗಿ ಸಂತ್ರಸ್ತೆ ಆಕಾಶ್‌ನನ್ನು ಭೇಟಿಯಾಗಿದ್ದಳು.