ಕೋಲ್ಕತಾ : ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಯಾಸ್ ಚಂಡಮಾರುತದ ಆರ್ಭಟ ಹೆಚ್ಚಾಗಿದ್ದು, ಇಂದು ಮಧ್ಯಾಹ್ನ ಒಡಿಶಾದ ಕರಾವಳಿ ತೀರಕ್ಕೆ ಯಾಸ್ ಚಂಡಮಾರುತ ಅಪ್ಪಳಿಸಿದೆ.
ಗಂಟೆಗೆ 155 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕರಾವಳಿ ತೀರದ ಯಾರೊಬ್ಬರು ಕೂಡ ಮನೆಯಿಂದ ಹೊರಗೆ ಬಾರದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಒಡಿಶಾದಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದಲೇ ಭೂಕುಸಿತ ಆರಂಭವಾಗಿದ್ದು, ಇಂದು ಮಧ್ಯಾಹ್ನ ಉತ್ತರ ಒಡಿಶಾವನ್ನು ಹಾದುಹೋಗಿರುವ ಯಾಸ್ ಚಂಡಮಾರುತದ ಅಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ದಕ್ಷಿಣ ಬಂಗಾಳದ ಕೋಲ್ಕತಾದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಪ್ರಾರಂಭವಾಗಿದ್ದು, ಪಶ್ಚಿಮ ಮಿಡ್ನಾಪೋರ್, ಬಂಕುರಾ, ಪುರುಲಿಯಾ ಮತ್ತು ನಾಡಿಯಾದಲ್ಲಿ ಮಳೆ ಸುರಿದಿದೆ. ಮುಂದಾಗುವ ಸಂಭವನೀಯ ಸಮಸ್ಯೆಗಳನ್ನು ಎದುರಿಸಲು ಪಶ್ಚಿಮ ಬಂಗಾಳದ 10 ಜಿಲ್ಲೆಗಳಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭೂಕುಸಿತ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಮೂರು ಗಂಟೆ ತೆಗೆದುಕೊಳ್ಳುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
"ಇದು ಮುಂದಿನ 3 ಗಂಟೆಗಳಲ್ಲಿ ಉತ್ತರ ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯ ಬಾಲಾಸೋರ್‌ನ ದಕ್ಷಿಣಕ್ಕೆ ದಾಟಲಿದ್ದು, ಗಂಟೆಗೆ ಸರಾಸರಿ 130 ರಿಂದ 155 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ" ಎಂದು ಎಂಇಟಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.