ಮೊರೆನಾ(ಮಧ್ಯ ಪ್ರದೇಶ):ತಲೆಗೆ ಗಾಯಗೊಂಡು ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಮೊರೆನಾ ಜಿಲ್ಲಾಸ್ಪತ್ರೆಗೆ ಬಂದಿದ್ದ ಮಹಿಳೆಯ ಬ್ಯಾಂಡೇಜ್ ತೆರೆದಾಗ ಅಲ್ಲಿದ್ದ ಕಾಂಡೋಮ್ ರ್ಯಾಪರ್ ನೋಡಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋ ಜಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.
ಆಸ್ಪತ್ರೆಗಳಲ್ಲಿ ಅವ್ಯವಸ್ಥೆ:ಮೊರೆನಾ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪ್ರಾಥಮಿಕ, ಉಪ ಆರೋಗ್ಯ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೊಂದಿರುವ ಸಿವಿಲ್ ಆಸ್ಪತ್ರೆ ಇದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗಳ ಸ್ಥಿತಿ ಹದಗೆಟ್ಟಿದ್ದು, ಸಾಮಾನ್ಯ ಪ್ರಕರಣಗಳಲ್ಲಿಯೂ ಚಿಕಿತ್ಸೆ ನೀಡದೆ ನೇರವಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಮಹಿಳೆಗೂ ಅದೇ ರೀತಿ ಆಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯ ತಲೆಗೆ ಹೊಲಿಗೆಗಳನ್ನು ಹಾಕದೆ ಬ್ಯಾಂಡೇಜ್ ಅಷ್ಟೇ ಹಾಕಿ ಜಿಲ್ಲಾಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ.
ಮಹಿಳೆ ಆಸ್ಪತ್ರೆಗೆ ಬಂದಾಗ ಬ್ಯಾಂಡೇಜ್ ಸರಿಯಾಗದೆ ರಕ್ತ ಸೋರಿಕೆಯಾಗುತ್ತಿತ್ತು. ಗಾಯ ಸ್ವಚ್ಛಗೊಳಿಸಿ ಹೊಲಿಗೆ ಹಾಕಲು ಜಿಲ್ಲಾಸ್ಪತ್ರೆಯ ವೈದ್ಯರು ಬ್ಯಾಂಡೇಜ್ ತೆಗೆದು ನೋಡಿದಾಗ ಹತ್ತಿ ಇಡಬೇಕಾದಲ್ಲಿ ಕಾಂಡೋಮ್ ರ್ಯಾಪರ್ ಇಟ್ಟು ಬ್ಯಾಂಡೇಜ್ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ ಶುಕ್ರವಾರ ರಾತ್ರಿ ನಡೆದ ಈ ಘಟನೆಯನ್ನು ಲಘುವಾಗಿ ಪರಿಗಣಿಸಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ.