ಮೊರಬಿ(ಗುಜರಾತ್):ಗುಜರಾತ್ನ ಮೊರಬಿಜಿಲ್ಲೆಯ ಹಳವಾಡದಲ್ಲಿ ದುರಂತ ಸಂಭವಿಸಿದೆ. ಸಾಗರ್ ಸಾಲ್ಟ್ ಎಂಬ ಕಾರ್ಖಾನೆಯಲ್ಲಿ ಗೋಡೆ ಕುಸಿದು, 12 ಕಾರ್ಮಿಕರು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಹಳವಾಡ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸುದ್ದಿ ತಿಳಿದಾಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹಳವಾಡ ಜಿಐಡಿಸಿಗೆ ತಲುಪಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದವು. ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಗೋಡೆ ಕುಸಿದಿದ್ದು, ಉಳಿದ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ದೌಡಾಯಿಸಿದರು. ಉಪ್ಪಿನ ಕಾರ್ಖಾನೆಯ ಗೋಡೆ ಏಕಾಏಕಿ ಕುಸಿದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಮಾಹಿತಿ ತಿಳಿದ ಬಳಿಕ ಗುಜರಾತ್ ಕಾಂಗ್ರೆಸ್ ಶಾಸಕ ಪುರುಷೋತ್ತಮ ಸವಾರಿಯಾ ಸ್ಥಳಕ್ಕೆ ಧಾವಿಸಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸಿದರು.
ಪ್ರಧಾನಿ ಮೋದಿ ಸಂತಾಪ : ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಗೋಡೆ ಕುಸಿದು ಸಂಭವಿಸಿದ ದುರಂತ ಹೃದಯ ವಿದ್ರಾವಕವಾಗಿದೆ. ದುಃಖತಪ್ತ ಕುಟುಂಬದವರ ನೋವಿನಲ್ಲಿ ತಾವು ಭಾಗಿಯಾಗುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಓದಿ:ಬೆಳಗಾವಿಯಲ್ಲಿ ಗೋಡೆ ಕುಸಿತ: ಕಟ್ಟಡ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ