ನವದೆಹಲಿ:ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಮತ್ತು ಪ್ರಾರ್ಥನೆಗೆ ಅವಕಾಶವಿದೆ. ಆದರೆ, ಪುರುಷರ ಜೊತೆಗೆ ಅವರು ಒಟ್ಟಾಗಿ ಪ್ರಾರ್ಥನೆ ಮಾಡಲು ಸಾಧ್ಯವಿಲ್ಲ. ಇದು ಇಸ್ಲಾಂ ನಿಯಮದಲ್ಲಿಲ್ಲ. ಹೀಗಾಗಿ ಮಹಿಳೆಯರು ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಮಹಿಳೆಯರು ಮಸೀದಿ ಪ್ರವೇಶಕ್ಕೆ ನಿಷೇಧಿಸಿರುವುದು ಕಾನೂನುಬಾಹಿರ. ಅದನ್ನು ತೆರವು ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ತನ್ನ ಅಭಿಪ್ರಾಯ ಸಲ್ಲಿಸಲು ಸೂಚಿಸಿತ್ತು. ಮಂಡಳಿ ಸಲ್ಲಿಸಿದ ಅಫಿಡವಿಟ್ನಲ್ಲಿ ಮಹಿಳೆಯರ ಪ್ರಾರ್ಥನೆಗೆ ಅವಕಾಶವಿದೆ. ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದೆ.
ಪ್ರತ್ಯೇಕವಾಗಿ ಮಸೀದಿಯಲ್ಲಿ ಪ್ರಾರ್ಥಿಸಲಿ:"ಇಸ್ಲಾಂನ ಅನುಯಾಯಿಗಳ ಧಾರ್ಮಿಕ ಪಠ್ಯಗಳು, ಸಿದ್ಧಾಂತಗಳು ಮತ್ತು ನಂಬಿಕೆಗಳನ್ನು ಪರಿಗಣಿಸಿ ಮಸೀದಿಗಳಲ್ಲಿ ನಮಾಜ್ ಮಾಡಲು ಮಹಿಳೆಯರ ಪ್ರವೇಶವನ್ನು ಅನುಮತಿಸಲಾಗಿದೆ. ಆದರೆ, ಒಂದೇ ಸಾಲಿನಲ್ಲಿ ಅಥವಾ ಎಲ್ಲರನ್ನೂ ಒಂದೆಡೆ ಸೇರಿಸಿ ನಮಾಜ್ ಮಾಡುವುದಕ್ಕೆ ಇಸ್ಲಾಂನಲ್ಲಿ ಸೂಚಿಸಿಲ್ಲ. ನಿರ್ವಹಣಾ ಸಮಿತಿಯು ಮಸೀದಿ ಆವರಣದೊಳಗೆ ಪುರುಷ- ಮಹಿಳೆಯರನ್ನು ಪ್ರತ್ಯೇಕಿಸಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಮಂಡಳಿ ತಿಳಿಸಿದೆ.
ಹೊಸ ಮಸೀದಿಗಳನ್ನು ನಿರ್ಮಿಸುವಾಗ ಮಹಿಳೆಯರಿಗೆ ಪ್ರಾರ್ಥನೆಗಾಗಿ ಸೂಕ್ತ ಸ್ಥಳಾವಕಾಶವನ್ನು ನಿಗದಿ ಮಾಡಬೇಕು. ಇದರಿಂದ ಅವರು ಪ್ರತ್ಯೇಕವಾಗಿ ಅಲ್ಲಾಹುವಿನ ಪ್ರಾರ್ಥನೆ ಮಾಡಬಹುದು. ಹೀಗಾಗಿ ನಿರ್ಮಾಣದ ವೇಳೆ ಗಮನಹರಿಸಿ ಎಂದು ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದೆ.
ಮಸೀದಿ ಪ್ರವೇಶಕ್ಕೆ ಮಹಿಳೆ ಸ್ವತಂತ್ರಳು:ಮುಸ್ಲಿಂ ಮಹಿಳೆಯು ಪ್ರಾರ್ಥನೆಗಾಗಿ ಮಸೀದಿಯನ್ನು ಪ್ರವೇಶಿಸಲು ಸ್ವತಂತ್ರಳಾಗಿದ್ದಾಳೆ. ಮಸೀದಿಯಲ್ಲಿ ಪ್ರಾರ್ಥನೆಗಾಗಿ ತನ್ನ ಹಕ್ಕನ್ನು ಚಲಾಯಿಸುವುದು ಅವಳ ಆಯ್ಕೆಯಾಗಿದೆ. ಧಾರ್ಮಿಕ ನಂಬಿಕೆಗಳನ್ನು ತಡೆಯಲು ಸಾಧ್ಯವಿಲ್ಲ. ಇಸ್ಲಾಂನ ನಿಯಮಾನುಸಾರವಾಗಿ ಎಲ್ಲರೂ ಮಸೀದಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಅದು ಹೇಳಿದೆ.