ಅಫ್ಜಲ್ಗಂಜ್(ತೆಲಂಗಾಣ):ಮಹಿಳೆಯೋರ್ವಳು ಬಸ್ಸಿನ ಟೈರ್ನಡಿ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೈದರಾಬಾದ್ನ ಅಫ್ಜಲ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 21 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪೊಲೀಸರು ವಿಡಿಯೋ ರಿಲೀಸ್ ಮಾಡಿದ್ದಾರೆ. ಮನೆಗೆ ಹೋಗುವ ಅವಸರದಲ್ಲಿ ಬಸ್ಸಿನಿಂದ ಕೆಳಗೆ ಇಳಿದಿರುವ ಮಹಿಳೆ ರಸ್ತೆ ಕ್ರಾಸ್ ಮಾಡಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.
ತೆಲಂಗಾಣ ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡಿರುವ ಮಹಿಳೆಯೋರ್ವಳು ಅದರಿಂದ ಕೆಳಗಿಳಿದು, ಮುಂಭಾಗದಿಂದ ದಾಟಲು ಮುಂದಾಗಿದ್ದಾರೆ. ಇದನ್ನು ಗಮನಿಸದೆ ಬಸ್ ಚಲಾಯಿಸಿದಾಗ ಮುಂಭಾಗದ ಟೈರ್ನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಚಂಚಲ್ ಗೂಡಿನ ಜೆಕೆ ಟವರ್ಸ್ ಪ್ರದೇಶದ ಸಿರಾಜ್ ಬಾನು ಮಾರ್ಚ್ 1ರಂದು ಮನೆಗೆ ಹೋಗಲು ಬಸ್ ಹತ್ತಿದ್ದಾರೆ. ಸಿದ್ದಿ ಅಂಬರ್ ಬಜಾರ್ ಸೇತುವೆ ಬಳಿ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ವೇಳೆ ಬಸ್ಸಿನಿಂದ ಕೆಳಗಿಳಿದ ಸಿರಾಜ್ ಬಾನು, ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ.