ಲಖನೌ( ಉತ್ತರ ಪ್ರದೇಶ):ಮಹಿಳೆಯೊಬ್ಬಳು ತನ್ನ ಮೃತ ತಂದೆಯ ಪತ್ನಿ ಎಂದು ಹೇಳಿಕೊಂಡು ಕಳೆದ 10 ವರ್ಷದಿಂದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದ ಆಘಾತಕಾರಿ ಪ್ರಕರಣ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೊಹ್ಸಿನಾ ಪರ್ವೇಜ್ (36) ಬಂಧಿತ ಆರೋಪಿ. ಈಕೆ ಕಳೆದ 10 ವರ್ಷಗಳಲ್ಲಿ ಸರ್ಕಾರದಿಂದ ಬರೋಬ್ಬರಿ 12 ಲಕ್ಷ ರೂ. ಪಿಂಚಣಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷ ಎಂದರೆ ಈ ಪ್ರಕರಣವನ್ನು ಬಯಲಿಗೆ ತಂದದ್ದು, ಈ ಮಹಿಳೆಯ ಪತಿ. ಆತ ನೀಡಿದ ದೂರಿನ ಮೇರೆಗೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: ಅಲಿಗಂಜ್ ನಗರದ ನಿವಾಸಿ ವಿಜರತ್ ಉಲ್ಲಾ ಖಾನ್ ಅವರು 1987ರಲ್ಲಿ ಲೇಖಪಾಲ್ (ಸರ್ವೇಯರ್) ಹುದ್ದೆಯಿಂದ ನಿವೃತ್ತರಾಗಿದ್ದರು. ಜನವರಿ 2013ರಂದು ನಿಧನರಾದರು. ಅಲ್ಲಿಯವರೆಗೂ ಅವರು ಸರ್ಕಾರದಿಂದ ನಿವೃತ್ತಿ ವೇತನ ಪಡೆದುಕೊಳ್ಳುತ್ತಿದ್ದರು. ಅವರ ಪತ್ನಿ ಸಬಿಯಾ ಬೇಗಂ ಅವರಿಗಿಂತ ಮೊದಲೇ ಮೃತಪಟ್ಟಿದ್ದರು.
ತನ್ನ ತಂದೆಯ ನಿಧನದ ನಂತರ ಮಗಳು ಮೊಹ್ಸಿನಾ ಪರ್ವೇಜ್ ತನ್ನ ಮೃತ ತಂದೆಯ ಹೆಂಡತಿ ಎಂದು ಹೇಳಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಂದಿನಿಂದ ಪಿಂಚಣಿ ಹಣ ಪಡೆಯಲು ಪ್ರಾರಂಭಿಸಿದರು. ಮೊಹ್ಸಿನಾ ಕಳೆದ 10 ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಬರೋಬ್ಬರಿ 12 ಲಕ್ಷಕ್ಕೂ ಹೆಚ್ಚು ಪಿಂಚಣಿ ಹಣ ಪಡೆದಿದ್ದಾರೆ. ಈ ನಡುವೆ ಮೊಹ್ಸಿನಾ 2017ರಲ್ಲಿ ಫಾರೂಕ್ ಅಲಿ ಎಂಬ ಯುವಕನನ್ನು ವಿವಾಹವಾದರು. ಆದರೆ, ಸ್ವಲ್ಪ ಸಮಯದ ನಂತರ ಅವರ ಸಂಬಂಧ ಹಳಸಿತ್ತು. ಬಳಿಕ ಇಬ್ಬರೂ ವಿಚ್ಛೇದನ ಪಡೆದಿದ್ದರು.