ಕರೌಲಿ(ರಾಜಸ್ಥಾನ):ಮಕ್ಕಳಿಲ್ಲ ಎಂದು ಕೊರಗುತ್ತಿದ್ದ ಮಹಿಳೆಯೊಬ್ಬರು ಮದುವೆಯಾಗಿ ಏಳು ವರ್ಷದ ಬಳಿಕ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ, ಇದರಲ್ಲಿ ಮೂರು ನವಜಾತ ಶಿಶುಗಳು ಸಾವನ್ನಪ್ಪಿದ್ದು, ತಾಯಿ ಹಾಗೂ ಇಬ್ಬರು ಮಕ್ಕಳಿಗೆ ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ರಾಜಸ್ಥಾನದ ಕರೌಲಿಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಸಾಮಾನ್ಯವಾಗಿ ಮಹಿಳೆಯೊಬ್ಬರು ಏಕಕಾಲಕ್ಕೆ ಎರಡ್ಮೂರು ಮಕ್ಕಳಿಗೆ ಜನ್ಮ ನೀಡುವ ಅನೇಕ ಪ್ರಕರಣ ನಡೆದಿವೆ. ಆದರೆ, ಕರೌಲಿಯಲ್ಲಿ ಗರ್ಭಿಣಿಯೊಬ್ಬರು ಐವರು ಮಕ್ಕಳಿಗೆ ಜನ್ಮ ನೀಡಿದ್ದು, ಈ ಘಟನೆಯಿಂದ ವೈದ್ಯರು ಆಶ್ಚರ್ಯಕ್ಕೊಳಗಾಗಿದ್ದಾರೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಅಕಾಲಿಕ ಹೆರಿಗೆಯಿಂದಾಗಿ ಮೂವರು ಮಕ್ಕಳು ಅಸುನೀಗಿವೆ.
ಇದನ್ನೂ ಓದಿರಿ:ಶಿಕ್ಷಣ ಇಲಾಖೆ ಅವ್ಯವಸ್ಥೆ ನೋಡಿ:1 ಕೊಠಡಿ, ಒಂದೇ ಬೋರ್ಡ್; ಐವರು ಶಿಕ್ಷಕರಿಂದ 1 ರಿಂದ 8ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಬೋಧನೆ!
ಕರೌಲಿ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿ ಇಷ್ಟೊಂದು ಮಕ್ಕಳಿಗೆ ಜನ್ಮ ನೀಡಿದ್ದಾರೆಂದು ಆಸ್ಪತ್ರೆಯ ನಿರ್ದೇಶಕಿ ಡಾ. ಭರತ್ಲಾಲ್ ಮೀನಾ ತಿಳಿಸಿದ್ದಾರೆ. ಏಳು ವರ್ಷದ ಬಳಿಕ ಮಹಿಳೆ ಇಷ್ಟೊಂದು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾರೆಂದು ಹೇಳಿದ್ದಾರೆ. ಏಳು ತಿಂಗಳ ಅವಧಿಯಲ್ಲಿ ಗರ್ಭಿಣಿ ಐವರು ಮಕ್ಕಳಿಗೆ ಜನ್ಮ ನೀಡಿದ್ದರಿಂದ ಮೂವರು ನವಜಾತ ಶಿಶುಗಳು ಈಗಾಗಲೇ ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ.
ಇಬ್ಬರು ಮಕ್ಕಳು ಹಾಗೂ ತಾಯಿಗೆ ಸದ್ಯ ಜೈಪುರ್ ಮಕ್ಕಳ ಘಟಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಉಳಿದ ಎರಡು ಮಕ್ಕಳ ಸ್ಥಿತಿ ಕೂಡ ಚಿಂತಾಜನಿಕವಾಗಿದೆ ಎಂದು ಹೇಳಲಾಗ್ತಿದೆ. ಕಳೆದ ಏಳು ವರ್ಷದಿಂದ ಮಕ್ಕಳು ಇಲ್ಲ ಎಂದು ಕೊರಗುತ್ತಿದ್ದ ಮಹಿಳೆಯ ಮನೆಯಲ್ಲಿ ಕೆಲಕಾಲ ಸಂಭ್ರಮ ಮನೆ ಮಾಡಿತ್ತು. ಆದರೆ, ಈಗಾಗಲೇ ಮೂವರು ಮಕ್ಕಳು ಸಾವನ್ನಪ್ಪಿದ್ದರಿಂದ ಕಾರ್ಮೋಡದ ವಾತಾವರಣ ನಿರ್ಮಾಣಗೊಂಡಿದೆ.
ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಕಳೆದ ಏಳು ವರ್ಷಗಳ ಹಿಂದೆ ರಾಜಸ್ಥಾನದ ಕರೌಲಿ ಜಿಲ್ಲೆಯ ಮಸಲ್ಪುರದ ಪಿಪ್ರಾನಿ ಗ್ರಾಮದ ಅಶ್ಕ್ ಅಲಿ ಹಾಗೂ ರೇಷ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ, ನಿತ್ಯ ಇದೇ ಕೊರಗಲ್ಲಿದ್ದರು. ಆದರೆ, ಕಳೆದ ಕೆಲ ತಿಂಗಳ ಹಿಂದೆ ರೇಷ್ಮಾ ಗರ್ಭ ಧರಿಸಿದ್ದರು. ಇದೀಗ, ಈ ಘಟನೆ ನಡೆದಿದೆ.