ಬೇತುಲ್, ಮಧ್ಯಪ್ರದೇಶ :ಬೇಡಿದರೂ ಆಹಾರ ಸಿಗದ ಹಿನ್ನೆಲೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ 'ರೇಷನ್ ಆಪ್ಕೇ ದ್ವಾರಾ' ಯೋಜನೆಯ ಕ್ರೂರ ವಾಸ್ತವತೆಯನ್ನು ಎತ್ತಿ ತೋರಿಸುತ್ತಿದೆ.
ರಿಂಕಿ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಸುಮಾರು ಎರಡೂವರೆ ವರ್ಷದ ಹಿಂದೆ ರಾಜ್‌ಕುಮಾರ್ ಎಂಬಾತನನ್ನ ಈಕೆ ವಿವಾಹವಾಗಿದ್ದರು. 17 ತಿಂಗಳ ಮಗು ಕೂಡ ಇದೆ. ರಿಂಕಿಯ ಪತಿ ರಾಜ್‌ಕುಮಾರ್ ಗುರುವಾರ ಪಡಿತರ ತೆಗೆದುಕೊಂಡು ಬರಲು ಹೊರಟ್ಟಿದ್ದು, ಹಿಂದಿರುಗಿದಾಗ ರಿಂಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅರ್ಧ ರೊಟ್ಟಿಯಲ್ಲೇ ಜೀವನ : ಒಂದು ವಾರದಿಂದ ಇಬ್ಬರಿಗೂ ಸರಿಯಾದ ಆಹಾರ ಸಿಕ್ಕಿರಲಿಲ್ಲ. ಪಾರ್ದಿ ಸಮುದಾಯದವರಾದ ಕಾರಣದಿಂದ ಯಾರೂ ಕೆಲಸ ಕೊಡುತ್ತಿರಲಿಲ್ಲವಂತೆ. ಇದರಿಂದಾಗಿಯೇ ರಿಂಕಿ ಭಿಕ್ಷಾಟನೆಗೆ ತೆರಳುತ್ತಿದ್ದಳು. ಹಲವು ದಿನಗಳಿಂದ ಸರಿಯಾದ ಊಟ ಸಿಕ್ಕಿರಲಿಲ್ಲ. ಆಗಾಗ ಒಂದೇ ರೊಟ್ಟಿಯನ್ನೇ ಅರ್ಧ-ಅರ್ಧ ಹಂಚಿ ತಿನ್ನುತ್ತಿದ್ದೆವು ಎಂದು ರಾಜಕುಮಾರ್ ಹೇಳಿದ್ದಾರೆ.
ಅಂದಹಾಗೆ, ಮಧ್ಯಪ್ರದೇಶದ ಪಾರ್ದಿ ಸಮುದಾಯವರು ಮೂಲತಃ ಬೇಟೆಗಾರರಾಗಿದ್ದಾರೆ. ಈಗ ಕಾಡಿನಲ್ಲಿ ಸಿಗುವ ಬಿದಿರು ಮುಂತಾದ ಮರಮುಟ್ಟುಗಳಿಂದ ಕೆಲವು ಸಾಮಗ್ರಿಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.
ರಾಜಕುಮಾರ್ ಕುಟುಂಬಕ್ಕೆ ‘ರೇಷನ್ ಆಪ್ಕೆ ದ್ವಾರಾ’ ಯೋಜನೆಯ ಪಡಿತರ ಚೀಟಿಯೂ ಇತ್ತು. ಆದರೆ, ಹಲವು ಬಾರಿ ಪಡಿತರ ಅಂಗಡಿಗೆ ತೆರಳಿದರೂ ಆತನಿಗೆ ಪಡಿತರ ಸಿಕ್ಕಿರಲಿಲ್ಲ. ಇದರಿಂದಾಗಿ ಆ ಕುಟುಂಬ ಉಪವಾಸ ಬೀಳುವಂತಾಗಿತ್ತು.
ಈಗ ಸದ್ಯಕ್ಕೆ ಮಹಿಳೆಯ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಮಾನಸಿಕ ಒತ್ತಡದಲ್ಲಿದ್ದಳು ಎಂದು ಎಸ್‌ಡಿಒಪಿ ನಿತೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ತನಿಖೆ ಮುಂದುವರೆಯುತ್ತಿದೆ.
ಸರ್ಕಾರ ಮಾತ್ರವಲ್ಲ.. ಊಟ ಹೆಚ್ಚಾಯ್ತೆಂದು ಅಥವಾ ಊಟ ಸರಿಯಿಲ್ಲವೆಂದು ದೂರುವವರು 'ಅಧಿಕಾರಯುತವಾಗಿ' ಆಹಾರವನ್ನು ಪೋಲು ಮಾಡುತ್ತಾರೆ. ತಿನ್ನುತ್ತಿರುವ ಆಹಾರ 'ನಮ್ಮದು' ಅಥವಾ ತಿನ್ನುತ್ತಿರುವ ಆಹಾರಕ್ಕೆ 'ಹಣ ಕೊಟ್ಟಿದ್ದೇವೆ', ಆದ್ದರಿಂದ ಆ ಆಹಾರದ ಮೇಲೆ ಎಲ್ಲಾ ಅಧಿಕಾರ ನಮಗಿದೆ ಎಂಬ ಮನಸ್ಥಿತಿಯಿಂದ ಜನರು ಹೊರಬರಬೇಕಿದೆ. ಪೋಲು ಮಾಡಲಿರುವ ಊಟ ಎಷ್ಟೋ ಹಸಿದವರ ಜೀವಗಳನ್ನು ಕಾಪಾಡುತ್ತವೆ ಎಂಬ ಅರಿವಿದ್ದರೆ ಹಸಿವಿನಿಂದ ಸಾಯುವವರ ಪ್ರಮಾಣ ಕಡಿಮೆಯಾಗಲಿದೆ.