ಕರ್ನಾಟಕ

karnataka

ETV Bharat / bharat

ತನಿಖಾ ಸಂಸ್ಥೆಗಳಿಂದ ಎಲೆಕ್ಟ್ರಾನಿಕ್ ಸಾಧನಗಳ ಜಪ್ತಿ ಕುರಿತ ಮಾರ್ಗಸೂಚಿ ಯಾವಾಗ ಬರುತ್ತೆ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ತನಿಖಾ ಸಂಸ್ಥೆಗಳಿಂದ ಡಿಜಿಟಲ್ ಸಾಧನಗಳನ್ನು ಶೋಧಿಸಲು ಮತ್ತು ವಶಪಡಿಸಿಕೊಳ್ಳುವ ವಿಷಯ ಸಂಬಂಧ ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಲು ಕೋರಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ನಡೆಸಿದೆ.

When will the output come; Sc to center on guidelines on seizure of electronic devices
ತನಿಖಾ ಸಂಸ್ಥೆಗಳಿಂದ ಎಲೆಕ್ಟ್ರಾನಿಕ್ ಸಾಧನಗಳ ಜಪ್ತಿ ಕುರಿತ ಮಾರ್ಗಸೂಚಿ ಯಾವಾಗ ಬರುತ್ತೆ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

By ETV Bharat Karnataka Team

Published : Dec 14, 2023, 6:32 PM IST

ನವದೆಹಲಿ: ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ, ಅದು ಯಾವಾಗ ಹೊರಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಇದೇ ವೇಳೆ, ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳುವ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವವರೆಗೆ ಕೇಂದ್ರೀಯ ಸಂಸ್ಥೆಗಳು ಡಿಜಿಟಲ್ ಸಾಕ್ಷ್ಯಗಳ ಕುರಿತು ಸಿಬಿಐ ಕೈಪಿಡಿಯನ್ನೇ ಅನುಸರಿಸುತ್ತವೆ ಎಂದು ಕೇಂದ್ರದ ವಕೀಲರು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದರು.

ತನಿಖಾ ಸಂಸ್ಥೆಗಳಿಂದ ಡಿಜಿಟಲ್ ಸಾಧನಗಳನ್ನು ಶೋಧಿಸಲು ಹಾಗೂ ವಶಪಡಿಸಿಕೊಳ್ಳಲು ಸಮಗ್ರ ಮಾರ್ಗಸೂಚಿಗಳನ್ನು ಕೋರಿ ದಿ ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಸಲ್ಲಿಸಿದ ಒಂದು ಅರ್ಜಿ ಸೇರಿದಂತೆ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ವ್ಯಕ್ತಿಗಳು, ಅದರಲ್ಲೂ ವಿಶೇಷವಾಗಿ ಮಾಧ್ಯಮ ವೃತ್ತಿಪರರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳುವ ಕುರಿತು ಮಾರ್ಗಸೂಚಿಗಳನ್ನು ಸಲ್ಲಿಸುವಂತೆ ನವೆಂಬರ್ 7ರಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಅಲ್ಲದೇ, ಈ ವಿಷಯವನ್ನು ಸರ್ವೋಚ್ಛ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಇಂದು ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ವಿಚಾರಣೆ ಕೈಗೊಂಡಿತು. ತನಿಖಾ ಸಂಸ್ಥೆಗಳ ವ್ಯಾಪಕ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌.ವಿ.ರಾಜು ಅವರಿಗೆ ಈ ವಿಷಯದಲ್ಲಿನ ಕಳವಳವನ್ನು ನ್ಯಾಯ ಪೀಠ ತಿಳಿಸಿತು. ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸಿ, ವಾದ ಮಂಡಿಸಿದ ಎಸ್‌.ವಿ.ರಾಜು, ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಇತರ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಕಾರಣ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಈಗಾಗಲೇ ಕರ್ನಾಟಕ ಪೊಲೀಸ್ ಕೈಪಿಡಿ ಇದ್ದು, ಇದರಲ್ಲಿ ವಿವರಗಳಿವೆ. ಜೊತೆಗೆ ಸಿಬಿಐ ಕೈಪಿಡಿಯೂ ಇದೆ. ಮಾರ್ಗಸೂಚಿಗಳೊಂದಿಗೆ ಹೊರಬರಲು ಸಮಯ ತೆಗೆದುಕೊಳ್ಳುತ್ತದೆ ಎಂದು ಎಸ್‌.ವಿ.ರಾಜು ಒತ್ತಿ ಹೇಳಿದರು. ಆಗ ನ್ಯಾಯಮೂರ್ತಿ ಕೌಲ್ ಅವರು, ''ನೋಡಿ, ಸಮಸ್ಯೆಯೆಂದರೆ, ಇದು ಎಷ್ಟು ಸಮಯದವರೆಗೆ ವ್ಯತ್ಯಾಸವನ್ನುಂಟು ಮಾಡುತ್ತದೆ?. ಇದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂದು ನೀವು ಭಾವಿಸುತ್ತೀರಿ?, ನೀವು ಸಭೆಗಳನ್ನು ನಡೆಸುತ್ತಿದ್ದೀರಿ. ಆದರೆ, ಅದರ ಫಲಿತಾಂಶ ಯಾವಾಗ ಹೊರಗೆ ಬರುತ್ತದೆ'' ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಸ್‌.ವಿ.ರಾಜು, ''ಒಂದು ತಿಂಗಳ ಸಮಯ ಬೇಕಾಗುತ್ತದೆ'' ಎಂದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಕೌಲ್, ''ಈ ಸಮಯವನ್ನು ಕನಿಷ್ಠ ಮಾಡಬೇಡಿ, ಗರಿಷ್ಠ ಸಮಯ ಎಂದು ಪರಿಗಣಿಸಿ'' ಎಂದು ಹೇಳಿದರು. ಈ ವೇಳೆ, ಎಸ್‌.ವಿ.ರಾಜು, ''ಮಾರ್ಗಸೂಚಿಗಳನ್ನು ಹೊರತರಲು ಮೂರು ತಿಂಗಳ ಕಾಲಾವಕಾಶ ನೀಡಬೇಕು'' ಎಂದು ನ್ಯಾಯ ಪೀಠಕ್ಕೆ ಮನವಿ ಮಾಡಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಅವರ ಮನವಿ ಕೇಳಿ ಮತ್ತೊಬ್ಬ ನ್ಯಾಯಮೂರ್ತಿ ಧುಲಿಯಾ ಮುಗುಳ್ನಕ್ಕರು.

ಮುಂದುವರೆದು, ನ್ಯಾಯಮೂರ್ತಿ ಕೌಲ್, ''ನೀವು ಕನಿಷ್ಠ ಅಸ್ತಿತ್ವದಲ್ಲಿರುವ ಕೈಪಿಡಿಗಳಲ್ಲಿ ಒಂದನ್ನು ಅನುಸರಿಸುತ್ತೀರಿ ಎಂದು ಹೇಳಿಕೆ ನೀಡಲು ಸಿದ್ಧರಿದ್ದೀರಾ?, ನೀವು ಅನುಸರಿಸುವ ಪ್ರಸ್ತುತ ಕೈಪಿಡಿ ಯಾವುದು? ಎಂದು ಪ್ರಶ್ನಿಸಿದರು. ಆಗ ಎಸ್‌.ವಿ.ರಾಜು, ''ಸಿಬಿಐ ಕೈಪಿಡಿ ಮತ್ತು ಸಿಆರ್‌ಪಿಸಿಯನ್ನು ಅನುಸರಿಸುತ್ತೇವೆ'' ಎಂದು ಉತ್ತರಿಸಿದರು. ಬಳಿಕ ಫೆಬ್ರವರಿ 6ಕ್ಕೆ ವಿಚಾರಣೆ ಮುಂದೂಡಲಾಯಿತು.

ಇದನ್ನೂ ಓದಿ:ಶ್ರೀಕೃಷ್ಣ ಜನ್ಮಭೂಮಿ ವಿವಾದ: ಮಥುರಾದ ಈದ್ಗಾ ಆವರಣದ ಸಮೀಕ್ಷೆಗೆ ಹೈಕೋರ್ಟ್ ಅಸ್ತು

ABOUT THE AUTHOR

...view details