ನವದೆಹಲಿ:ಅದು 1984ರ ಮಾರ್ಚ್ 31ನೇ ತಾರೀಖು. 'ಉಕ್ಕಿನ ಮಹಿಳೆ' ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಮೇಲೆ ಅಂಗರಕ್ಷಕರೇ ಗುಂಡು ಹಾರಿಸಿದ್ದರು. ಬಂದೂಕಿನ ನಳಿಕೆಯಿಂದ ಸಿಡಿದ ಗುಂಡುಗಳು ಮಾಜಿ ಪ್ರಧಾನಿಯ ದೇಹ ಸೀಳಿದ್ದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ತುರ್ತು ರವಾನೆ ಮಾಡಲಾಗಿತ್ತು. ಅತ್ಯಂತ ಭೀಕರ ದಾಳಿಗೆ ತುತ್ತಾಗಿದ್ದ ಇಂದಿರಾ ಅವರನ್ನು ಉಳಿಸಿಕೊಳ್ಳಲು ವೈದ್ಯರು ನಡೆಸಿ ಶತಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ.
ಅಂದಿನ ಕಹಿ ಘಟನೆಗಳನ್ನು ಏಮ್ಸ್ ನಿರ್ದೇಶಕರಾಗಿದ್ದ, ಇಂದಿರಾ ಗಾಂಧಿಗೆ ಕೊನೆ ಘಳಿಗೆಯಲ್ಲಿ ಚಿಕಿತ್ಸೆ ನೀಡಿದ್ದ ಮಾಜಿ ಸರ್ಜನ್ ಡಾ.ಪಿ.ವೇಣುಗೋಪಾಲ್ ಅವರು ತಮ್ಮ ಆತ್ಮಚರಿತ್ರೆ 'ಹಾರ್ಟ್ಫೆಲ್ಟ್' ಪುಸ್ತಕದಲ್ಲಿ ಸವಿವರವಾಗಿ ಬರೆದಿದ್ದಾರೆ. ಕಳೆದ ವಾರ ಈ ಪುಸ್ತಕ ಲೋಕಾರ್ಪಣೆಗೊಂಡಿದೆ. ಮಾಜಿ ಪ್ರಧಾನಿಯನ್ನು ಬದುಕಿಸಿಕೊಳ್ಳಲು ಕೊನೆಯ 4 ಗಂಟೆಗಳ ಕಾಲ ವೈದ್ಯರು, ದಾದಿಯರು, ಶಸ್ತ್ರಚಿಕಿತ್ಸಕರು ನಡೆಸಿದ ಅವಿರತ ಪ್ರಯತ್ನದ ಬಗ್ಗೆ ವೇಣುಗೋಪಾಲ್ ಅವರು ಪುಸ್ತಕದಲ್ಲಿ ಮನಮುಟ್ಟುವಂತೆ ಉಲ್ಲೇಖಿಸಿದ್ದಾರೆ.
ರಕ್ತದ ಹೊಳೆ..:ನಾನು ಆಪರೇಷನ್ ಥಿಯೇಟರ್ಗೆ ಹೋದಾಗ ಗುಂಡಿನ ದಾಳಿಯಿಂದಾಗಿ ಇಂದಿರಾ ಅವರ ಸೀರೆ ರಕ್ತದಿಂದ ತೊಯ್ದಿತ್ತು. ಆಸ್ಪತ್ರೆ ನೆಲದ ತುಂಬೆಲ್ಲ ಗುಂಡುಗಳು ಬಿದ್ದಿದ್ದವು. ವೈದ್ಯರು ವಿಶೇಷ ಗುಂಪಾದ ಒ-ನೆಗೆಟಿವ್ ರಕ್ತವನ್ನು ದೇಹಕ್ಕೆ ಏರಿಸುವ ಯತ್ನ ಮಾಡುತ್ತಿದ್ದರು. ಇತ್ತ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಮುಂದಿನ ಪ್ರಧಾನಿ ಪ್ರಮಾಣ ವಚನದ ಬಗ್ಗೆ ರಾಜಕೀಯ ಚರ್ಚೆಗಳು ನಡೆಯುತ್ತಿದ್ದರು. ಇದೆಲ್ಲವೂ ಘಟಿಸಿ 39 ವರ್ಷಗಳು ಸಂದಿವೆ. ಈ ಚಿತ್ರಣ ಈಗಲೂ ನನ್ನ ಕಣ್ಣ ಮುಂದಿದೆ ಎಂದು ಅವರು ಬರೆದಿದ್ದಾರೆ.
ಹಾಸಿಗೆಯ ಮೇಲಿದ್ದ ಇಂದಿರಾ ಅವರನ್ನು ನೋಡಿ ನಾನು ಅರೆಕ್ಷಣ ಬೆಚ್ಚಿಬಿದ್ದೆ. ಹೊಟ್ಟೆಯ ಭಾಗದಿಂದ ರಕ್ತ ಚಿಮ್ಮುತ್ತಿತ್ತು. ಇಡೀ ದೇಹ ರಕ್ತದಿಂದ ಕೆಂಪೇರಿತ್ತು. ಕಾಂತಿಯುತ ಮುಖ ಮಸುಕಾಗಿತ್ತು. ರಕ್ತವೆಲ್ಲ ದೇಹದಿಂದ ಬಸಿದು ಧಾರಾಕಾರವಾಗಿ ಹರಿದು ಹೋಗಿತ್ತು. ವೈದ್ಯರು ರಕ್ತವನ್ನು ನಿಲ್ಲಿಸುವ ಮತ್ತು ಬೇರೆ ರಕ್ತವನ್ನು ದೇಹಕ್ಕೆ ಸೇರಿಸುವ ಯತ್ನ ಮಾಡುತ್ತಿದ್ದರು. ಇದೆಲ್ಲವನ್ನೂ ನೋಡಿದ ನನಗೆ ನಮ್ಮ ಪ್ರಯತ್ನ ವ್ಯರ್ಥ ಅನ್ನಿಸಿತ್ತು. ಏಮ್ಸ್ನಲ್ಲಿನ ವೈದ್ಯರು, ದಾದಿಯರ ಓಡಾಟ, ಅವರ ಮುಖದ ಮೇಲಿನ ಆತಂಕದ ಛಾಯೆ ಆವೇಗ ಪಡೆದುಕೊಂಡಿತ್ತು.
ದೇಹ ಛಿದ್ರಗೊಳಿಸಿದ್ದ ಗುಂಡುಗಳು..:ಆ ದಿನವೇ ನಿರ್ದೇಶಕರಾಗಿ ಅಧಿಕಾರ ಮುಗಿಸಿದ್ದ ಡಾ.ಎಚ್.ಡಿ.ಟಂಡನ್ ಮತ್ತು ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದ ಡಾ.ಸ್ನೇಹ ಭಾರ್ಗವ್ ಅವರು ನನ್ನ ಕಡೆ ದಿಟ್ಟಿಸಿ ನೋಡಿದ್ದರು. ಆ ನೋಟ 'ಏನಾದರೂ ಮಾಡಿ ಬದುಕಿಸಿ' ಎಂಬತ್ತಿತ್ತು. ಹೃದಯ ಶಸ್ತ್ರಚಿಕಿತ್ಸಕ ವೈದ್ಯನಾಗಿ ನಾನು ತಕ್ಷಣದ ನಿರ್ಧಾರ ಕೈಗೊಂಡು ಆಪರೇಷನ್ ಥಿಯೇಟರ್ಗೆ ಕರೆದೊಯ್ಯಲು ಹೇಳಿದೆ. ದೇಹದಿಂದ ಬಸಿಯುತ್ತಿದ್ದ ರಕ್ತವನ್ನು ಮೊದಲು ನಿಲ್ಲಿಸಬೇಕು. ಯಾರ ಆದೇಶ, ಪ್ರಕ್ರಿಯೆಗಳಿಗೆ ಕಾಯದೇ ಒಟಿಗೆ ಧಾವಿಸಿದೆವು.
ದೇಹವನ್ನು ಗುಂಡುಗಳು ಜರ್ಜರಿತವನ್ನಾಗಿ ಮಾಡಿದ್ದವು. ಹೊಟ್ಟೆಯ ಭಾಗದಲ್ಲಿ ಹಲವು ಗುಂಡುಗಳು ಹೊಕ್ಕಿದ್ದವು. ಹೀಗಾಗಿ ರಕ್ತ ನಿಲುಗಡೆ ಮತ್ತು ಸೇರಿಸುವ ಯಾವ ಕೆಲಸವೂ ಫಲ ನೀಡಲಿಲ್ಲ. 4 ಗಂಟೆಗಳ ಕಾಲ ಸತತ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಇಂದಿರಾ ಅವರ ಶಾಶ್ವತವಾಗಿ ಕಣ್ಣು ಮುಚ್ಚಿದ್ದರು. ಇದು ನನ್ನಲ್ಲಿ ಹತಾಶೆ ಭಾವ ಉಂಟುಮಾಡಿತು. ಪ್ರಧಾನಿಯೊಬ್ಬರನ್ನು ಉಳಿಸಿಕೊಳ್ಳದ ಸಂಕಟ ನನ್ನನ್ನು ಕಾಡಿತು ಎಂದು ಅವರು ಪುಸ್ತಕದಲ್ಲಿ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರಿಡಾರ್‌ನಲ್ಲಿ ಮುಂದಿನ ಪ್ರಧಾನಿ ಚರ್ಚೆ:ಅತ್ತ ಪ್ರಧಾನಿ ಇಂದಿರಾಗೆ ಚಿಕಿತ್ಸೆ ನಡೆಯುತ್ತಿದ್ದರೆ, ಇತ್ತ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಮುಂದಿನ ಪ್ರಧಾನಿ ಯಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಅದೇ ಸಮಯಕ್ಕೆ ವಿದೇಶ ಪ್ರವಾಸದಲ್ಲಿದ್ದ ರಾಜೀವ್ ಗಾಂಧಿ ಅವರು ವಾಪಸಾಗುತ್ತಿದ್ದರು. ಅವರನ್ನೇ ಪ್ರಧಾನಿ ಮಾಡುವ ಬಗ್ಗೆ ಚರ್ಚೆಗಳು ಜೋರಾಗಿದ್ದವು. ಅಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಗ್ಯಾನಿ ಜೈಲ್ಸಿಂಗ್ ಅವರು ರಾಜೀವ್ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸಿದ್ದರು.
ದೇಹ ಹೊಕ್ಕಿದ್ದ 33 ಗುಂಡುಗಳು:ಅಂಗರಕ್ಷಕರ ಕ್ರೌರ್ಯಕ್ಕೆ ಬಲಿಯಾಗಿದ್ದ ಇಂದಿರಾ ಅವರ ದೇಹದಲ್ಲಿ ಗನ್ ಮಷಿನ್ನ 33 ಗುಂಡುಗಳು ಅವರ ದೇಹವನ್ನು ಛಿದ್ರ ಮಾಡಿದ್ದರು. ಅದರಲ್ಲೂ 23 ಬುಲೆಟ್ ದೇಹವನ್ನು ಹಾದು ಹೋಗಿದ್ದವು. ಇಂದಿರಾ ಹತ್ಯೆಯ ನಂತರ ಸಿಖ್ ಮಾರಣಹೋಮವೇ ನಡೆಯಿತು. ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಸಿಖ್ಖರು ಮತ್ತು ಅವರ ಆಸ್ತಿಗಳ ಮೇಲೆ ದಾಳಿ ನಡೆದು, 3 ಸಾವಿರಕ್ಕೂ ಅಧಿಕ ಸಿಖ್ಖರು ಕೊಲ್ಲಲ್ಪಟ್ಟಿದ್ದು ಇತಿಹಾಸ.!
ಇದನ್ನೂ ಓದಿ:GST Council Meeting: ಕ್ಯಾನ್ಸರ್ ಔಷಧಿಗೆ ತೆರಿಗೆ ವಿನಾಯಿತಿ; ಆನ್ಲೈನ್ ಗೇಮಿಂಗ್, ಕುದುರೆ ರೇಸಿಂಗ್ ಮೇಲೆ ಶೇ.28ರಷ್ಟು ಜಿಎಸ್ಟಿ