ಹೈದರಾಬಾದ್ :ಅಗತ್ಯವಸ್ತುಗಳ ದರ ಏರಿಕೆ, ಕೋವಿಡ್ ನಿರ್ವಹಣೆ, ಲಸಿಕೆ ಕೊರತೆ ವಿಚಾರ ಸೇರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದೀಗ ಚೀನಾ-ಭಾರತ ಗಡಿಗೆ ಸಂಬಂಧಿಸಿದಂತೆ ನಮೋ ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬೆಂಬಲಿಗರು ಭಾರತದ ಸಾವಿರಾರು ಕಿಲೋಮೀಟರ್ ಭೂ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಿದ್ದಾರೆ. ನಾವು ಅದನ್ನು ಯಾವಾಗ ಮರಳಿ ಪಡೆಯುತ್ತೇವೆ? ಎಂದು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ ಶನಿವಾರ ಸಂಜೆ ಗಡಿ ನಿಯಂತ್ರಣ ರೇಖೆಯ ಮೊಲ್ಡೊ ಪ್ರದೇಶದಲ್ಲಿ ನಡೆಯಿತು. ಸತತ 9 ಗಂಟೆಗಳ ಸುದೀರ್ಘ ಮಾತುಕತೆಯ ಸಮಯದಲ್ಲಿ ಪೂರ್ವ ಲಡಾಖ್ನ ಹಾಟ್ ಸ್ಪ್ರಿಂಗ್ಸ್, ಗೋಗ್ರಾ ಸೇರಿ ಇತರೆ ಪ್ರದೇಶಗಳಲ್ಲಿರುವ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಭಾರತವು ಚೀನಾಗೆ ಒತ್ತಾಯಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಚರ್ಚೆಯ ಫಲಿತಾಂಶದ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಉಭಯ ರಾಷ್ಟ್ರಗಳ ನಡುವೆ ನಡೆದ ನಿರಂತರ ಮಾತುಕತೆಯಿಂದಾಗಿ ಪಾಂಗಾಂಗ್ ಸರೋವರದಿಂದ ಸೇನೆಗಳು ಹಿಂದೆ ಸರಿದಿವೆ.