ಕರ್ನಾಟಕ

karnataka

ETV Bharat / bharat

ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸಗಢಗಳಲ್ಲಿ ಗೆದ್ದೇ ಗೆಲ್ತೀವಿ; ರಾಹುಲ್ ಗಾಂಧಿ ವಿಶ್ವಾಸ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಗೆಲ್ಲಲಿದೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Congress MP Rahul Gandhi speaks on his party poll prospects in five States
Congress MP Rahul Gandhi speaks on his party poll prospects in five States

By ETV Bharat Karnataka Team

Published : Sep 24, 2023, 4:24 PM IST

ನವದೆಹಲಿ: ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ಕಾಂಗ್ರೆಸ್​ ಖಂಡಿತವಾಗಿಯೂ ಗೆಲ್ಲಲಿದೆ ಮತ್ತು ತೆಲಂಗಾಣದಲ್ಲೂ ಬಹುತೇಕ ಗೆಲುವಿನ ಹತ್ತಿರದಲ್ಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ರಾಜಸ್ಥಾನದಲ್ಲಿ ತೀರಾ ಪೈಪೋಟಿಯ ಸ್ಪರ್ಧೆ ಇದ್ದು, ಪಕ್ಷ ಅಲ್ಲಿಯೂ ವಿಜಯಶಾಲಿಯಾಗಲಿದೆ ಎಂದು ರಾಹುಲ್ ನುಡಿದಿದ್ದಾರೆ.

ಲೋಕಸಭೆಯಲ್ಲಿ ಬಿಎಸ್​ಪಿ ನಾಯಕ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಸಂಗವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಜಾತಿ ಜನಗಣತಿಯ ಬೇಡಿಕೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಇಂತಹ ತಂತ್ರಗಳಲ್ಲಿ ತೊಡಗಿದೆ ಎಂದು ಆರೋಪಿಸಿದರು. ಪ್ರತಿಪಕ್ಷಗಳು ಹೊಂದಾಣಿಕೆಯಿಂದ ಒಟ್ಟಾಗಿ ಕೆಲಸ ಮಾಡುತ್ತಿವೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಆಶ್ಚರ್ಯವಾಗುವಂಥ ಪ್ರದರ್ಶನ ನೀಡಲಿವೆ ಎಂದು ಅವರು ಪ್ರತಿಪಾದಿಸಿದರು.

ಅಸ್ಸಾಂನ ಪ್ರತಿದಿನ್ ಮೀಡಿಯಾ ನೆಟ್​ವರ್ಕ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನೆಯು ಜನರ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಗುರಿಯನ್ನು ಹೊಂದಿದೆ. ಇದು ಬಿಜೆಪಿಯ ಗೊಂದಲ ಮೂಡಿಸುವ ತಂತ್ರಗಳಲ್ಲಿ ಒಂದಾಗಿದೆ ಎಂದು ಅವರು ಪ್ರತಿಪಾದಿಸಿದರು. ಸಂಪತ್ತಿನ ಕೇಂದ್ರೀಕರಣ, ಸಂಪತ್ತಿನ ಭಾರಿ ಅಸಮಾನತೆ, ಬೃಹತ್ ಪ್ರಮಾಣದ ನಿರುದ್ಯೋಗ, ಕೆಳಜಾತಿ, ಒಬಿಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಭಾರಿ ಅನ್ಯಾಯ ಮತ್ತು ಬೆಲೆ ಏರಿಕೆ ಇವು ಇಂದಿನ ಭಾರತದ ಪ್ರಮುಖ ಸಮಸ್ಯೆಗಳಾಗಿವೆ ಎಂದು ಅವರು ಹೇಳಿದರು.

"ಈ ಯಾವ ಸಮಸ್ಯೆಗಳನ್ನೂ ಪರಿಹರಿಸಲು ಸಾಧ್ಯವಿಲ್ಲದ ಬಿಜೆಪಿ ಈಗ ಮಿಸ್ಟರ್ ಬಿಧುರಿ ಅವರಿಂದ ಅಂಥ ಹೇಳಿಕೆಗಳನ್ನು ಕೊಡಿಸುತ್ತಿದೆ. ಎಲ್ಲರೂ ಒಂದಾಗಿ ಒಟ್ಟಿಗೆ ಚುನಾವಣೆಗಳನ್ನು ನಡೆಸೋಣ ಮತ್ತು ಭಾರತದ ಹೆಸರನ್ನು ಬದಲಾಯಿಸೋಣ ಎಂಬೆಲ್ಲ ವಿಷಯಗಳು ಗೊಂದಲಕಾರಿಯಾಗಿವೆ. ನಮಗೆ ಇದು ಅರ್ಥವಾಗಿದ್ದು, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಅವರು ಹೇಳಿದರು. ಮುಂಬರುವ ರಾಜ್ಯ ವಿಧಾನಸಭೆಗಳ ಚುನಾವಣೆಯಲ್ಲಿ ತಮ್ಮ ಪಕ್ಷವು ಯಾವುದೇ ರಾಜ್ಯದಲ್ಲಿ ಸೋಲುವ ಪ್ರಶ್ನೆಯೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶೀಘ್ರದಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಕ್ಷ ಗೆಲ್ಲುವ ಸಾಧ್ಯತೆಗಳೆಷ್ಟು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇದೀಗ ನಾವು ಬಹುಶಃ ತೆಲಂಗಾಣದಲ್ಲಿ ಗೆಲುವಿಗೆ ಹತ್ತಿರವಾಗಿದ್ದೇವೆ. ಮಧ್ಯಪ್ರದೇಶ ಮತ್ತು ಛತ್ತೀಸಗಢಗಳಲ್ಲಿ ಖಂಡಿತವಾಗಿಯೂ ಗೆಲ್ಲುತ್ತೇವೆ. ರಾಜಸ್ಥಾನದಲ್ಲೂ ಗೆಲುವಿಗೆ ಹತ್ತಿರದಲ್ಲಿದ್ದೇವೆ. ಬಿಜೆಪಿ ಕೂಡ ಆಂತರಿಕವಾಗಿ ಇದೇ ನಿಲುವು ಹೊಂದಿದೆ" ಎಂದು ಅವರು ಹೇಳಿದರು.

"ನಮ್ಮ ಪಕ್ಷದ ಬಗ್ಗೆ ಜನರಲ್ಲಿ ದೃಷ್ಟಿಕೋನ ನಿರ್ಮಿಸಲು ನಮಗೆ ಅವಕಾಶ ನೀಡದೆ ಗಮನವನ್ನು ಬೇರೆಡೆಗೆ ಸೆಳೆಯುವ ಮೂಲಕ ಬಿಜೆಪಿ ಇಷ್ಟು ವರ್ಷಗಳ ಕಾಲ ಚುನಾವಣೆಗಳಲ್ಲಿ ಗೆದ್ದಿದ್ದನ್ನು ನೋಡಿ ನಾವು ಕರ್ನಾಟಕದಲ್ಲಿ ಬಹಳ ಮುಖ್ಯವಾದ ಪಾಠ ಕಲಿತಿದ್ದೇವೆ. ಇಂದು ನೀವು ನೋಡುತ್ತಿರುವ ಬಿಧುರಿ ಮತ್ತು ನಂತರ ಮಾತನಾಡಿದ ನಿಶಿಕಾಂತ್ ದುಬೆ, ಇದೆಲ್ಲವೂ ಜಾತಿ ಜನಗಣತಿಯ ವಿಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಬಿಜೆಪಿಯ ಪ್ರಯತ್ನವಾಗಿದೆ. ಆದರೆ ಜಾತಿ ಜನಗಣತಿ ಇದು ಭಾರತದ ಜನತೆ ಪ್ರಸ್ತುತ ಬಯಸುತ್ತಿರುವ ಮುಖ್ಯ ವಿಷಯವಾಗಿದೆ" ಎಂದು ರಾಹುಲ್ ನುಡಿದರು.

ಇದನ್ನೂ ಓದಿ : 9 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ; ತ್ವರಿತ ಪ್ರಯಾಣವೇ ನಮ್ಮ ಗುರಿ ಎಂದ ಪ್ರಧಾನಿ ಮೋದಿ

ABOUT THE AUTHOR

...view details