ನವದೆಹಲಿ :ಮಾರ್ಚ್ ತಿಂಗಳಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವ ಕುರಿತು ಯೋಚಿಸುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.80-85 ಕೊರೊನಾ ವಾರಿಯರ್ಗಳು ಲಸಿಕೆ ಪಡೆದಿದ್ದಾರೆ. 20 ರಿಂದ 25 ದೇಶಗಳಲ್ಲಿ ಭಾರತದ ಕೋವಿಡ್ ವ್ಯಾಕ್ಸಿನ್ ಲಭ್ಯವಾಗಲಿದೆ. 18-20 ಲಸಿಕೆಗಳು ಪೂರ್ವಭಾವಿ ಹಾಗೂ ಕ್ಲಿನಿಕಲ್ ಹಂತಗಳಲಿವೆ. ಮುಂದಿನ ತಿಂಗಳುಗಳಲ್ಲಿ ಇವು ಲಭ್ಯವಾಗಲಿವೆ.
ನೈಜ ಲಸಿಕೆಗಳ ಜೊತೆ 'ಸೋಷಿಯಲ್ ವ್ಯಾಕ್ಸಿನ್' ಎಂದು ಕರೆಯುವ ಕೋವಿಡ್ ನಿಯಮಗಳನ್ನು ಜನರು ಪಾಲಿಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಕೊರೊನಾ ದೇಶದ ಆರೋಗ್ಯ ಸಾಮರ್ಥ್ಯ ಬಲಪಡಿಸಿದೆ. ನಾವು ಈ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿದ್ದೇವೆ. 1 ಲ್ಯಾಬ್‌ನಿಂದ 2,500 ಕೋವಿಡ್ ಟೆಸ್ಟಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಿದ್ದೇವೆ.
ಕಳೆದ 7 ದಿನಗಳಲ್ಲಿ ದೇಶದ 188 ಜಿಲ್ಲೆಗಳಲ್ಲಿ ಒಂದೂ ಹೊಸ ಕೇಸ್ ಪತ್ತೆಯಾಗಿಲ್ಲ. ನನ್ನ ಪ್ರಕಾರ, 'ಎಲ್ಲರಿಗೂ ಆರೋಗ್ಯ' ಎಂಬ ಕನಸು ಜಗತ್ತಿನಲ್ಲಿ ಈಡೇರಬೇಕಾದರೆ, ಅದರ ಮಾದರಿಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ನಮ್ಮ ವೈದ್ಯಕೀಯ ವಿಧಾನ, ಪ್ರಾಚೀನ ವೈದ್ಯಕೀಯ ಜ್ಞಾನ, ಇತರ ಆರೋಗ್ಯ ಸೌಲಭ್ಯಗಳು ಮತ್ತು ವ್ಯವಸ್ಥೆಗಳು ಒಟ್ಟಾಗಿ ಜಗತ್ತಿಗೆ ಸ್ಫೂರ್ತಿಯಾಗುತ್ತವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: 1 ತಿಂಗಳಲ್ಲೇ 2 ಬಾರಿ LPG ಸಿಲಿಂಡರ್ ಬೆಲೆ ಹೆಚ್ಚಳ.. ಮತ್ತೆ ₹50 ಏರಿಸಿ ಜೇಬಿಗೆ ಕೊಳ್ಳಿ ಇಟ್ಟ ಸರ್ಕಾರ..
ಭಾರತದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಈವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 82,85,295 ಮಂದಿಗೆ ಲಸಿಕೆ ನೀಡಲಾಗಿದೆ. ಈವರೆಗೆ 1,09,16,589 ಕೊರೊನಾ ಕೇಸ್ಗಳು, 1,55,732 ಸಾವು ವರದಿಯಾಗಿದೆ. ಆದರೆ ಒಟ್ಟು ಸೋಂಕಿತರ ಪೈಕಿ 1,06,21,220 ಮಂದಿ ಗುಣಮುಖರಾಗಿದ್ದು, 1,39,637 ಕೇಸ್ಗಳು ಸಕ್ರಿಯವಾಗಿವೆ.