ನವದೆಹಲಿ: ದೇಶದ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ಮೂಲಕ ಅವರು ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರವು ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಈ ಸರ್ಕಾರಕ್ಕೆ ಸಬಲೀಕರಣ ಎಂದರೇನು ಮತ್ತು ಅರ್ಹತೆ ಎಂದರೇನು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿದೆ. ನೀವು ಜನರನ್ನು ಸಬಲೀಕರಣಗೊಳಿಸಬೇಕಾದರೆ ಯಾವುದೇ ಅರ್ಹತೆಗಳನ್ನು ಪರಿಗಣಿಸುವಂತಿಲ್ಲ. ನೀವು ಅವರಿಗೆ ಮೂಲಭೂತ ಅವಶ್ಯಕತೆಗಳನ್ನು ನೀಡುವಿರಿ ಮತ್ತು ಆ ಮೂಲಕ ಜನತೆ ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಅವರು ಹೇಳಿದರು. ಶುಕ್ರವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಡಿಮೆ ಆದಾಯದ ಮಿತಿಯಲ್ಲಿರುವವರಿಗೆ ಕಡಿಮೆ ತೆರಿಗೆ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಏಳು ತೆರಿಗೆ ಸ್ಲ್ಯಾಬ್‌ಗಳೊಂದಿಗೆ ಐಚ್ಛಿಕ ಆದಾಯ ತೆರಿಗೆ ಪದ್ಧತಿಯನ್ನು ಜಾರಿ ಮಾಡಿದೆ. ಹಳೆಯ ತೆರಿಗೆ ಪದ್ಧತಿಯ ಪ್ರಕಾರ ಪ್ರತಿಯೊಬ್ಬ ತೆರಿಗೆದಾರರು ಸುಮಾರು 7 ರಿಂದ 10 ಬಗೆಯ ವಿನಾಯಿತಿಗಳನ್ನು ಪಡೆಯಬಹುದು ಮತ್ತು ಆದಾಯದ ಮಿತಿಯನ್ನು ಅವಲಂಬಿಸಿ ಆದಾಯ ತೆರಿಗೆ ದರಗಳು ಶೇಕಡಾ 10, 20 ಮತ್ತು 30 ರ ನಡುವೆ ಬದಲಾಗುತ್ತವೆ ಎಂದು ಸೀತಾರಾಮನ್ ಹೇಳಿದರು.
ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಉಪಾಧ್ಯಕ್ಷ ಗೌತಮ್ ಚಿಕರ್ಮನೆ ಅವರು ಬರೆದ ‘ರಿಫಾರ್ಮ್ ನೇಷನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು. 2020-21ರ ಬಜೆಟ್‌ನಲ್ಲಿ ಸರ್ಕಾರವು ಐಚ್ಛಿಕ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಿದೆ. ಅದರ ಅಡಿಯಲ್ಲಿ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUFs) ಗೃಹ ಸಾಲ ಮತ್ತು ಸೆಕ್ಷನ್ 80C ಅಡಿಯಲ್ಲಿ ಮಾಡಿದ ಹೂಡಿಕೆಗಳಲ್ಲಿ ನಿರ್ದಿಷ್ಟ ವಿನಾಯಿತಿ ಮತ್ತು ಮನೆ ಬಾಡಿಗೆ ಭತ್ಯೆ (HRA), ಬಡ್ಡಿಯಂಥ ಕಡಿತಗಳನ್ನು ಪಡೆಯದಿದ್ದರೆ ಅವರಿಗೆ ಕಡಿಮೆ ತೆರಿಗೆ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.