ನವದೆಹಲಿ :ಶೀಘ್ರದಲ್ಲೇ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ನ್ನು ಆಯೋಜನೆ ಮಾಡುವುದಾಗಿ ಡಬ್ಲ್ಯೂಎಫ್ಐ ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ. ಭಾರತದ ಕುಸ್ತಿ ಫೆಡರೇಷನ್(ಡಬ್ಲ್ಯೂಎಫ್ಐ) ನೂತನ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿತ್ತು. ಬಳಿಕ ನೂತನ ತಾತ್ಕಾಲಿಕ ಸಮಿತಿಯನ್ನು ನೇಮಕ ಮಾಡಿತ್ತು. ಇದರ ಬೆನ್ನಲ್ಲೇ, ತಾತ್ಕಾಲಿಕ ಸಮಿತಿ ನೇಮಕ ಮಾಡಿರುವುದಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ಆಯೋಜನೆ ಮಾಡುತ್ತೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಭಾರತದ ಕುಸ್ತಿ ಫೆಡರೇಶನ್ನ ಅಧ್ಯಕ್ಷೀಯ ಚುನಾವಣೆ ನಡೆದ ಮೂರು ದಿನಗಳ ಬಳಿಕ ಕೇಂದ್ರ ಕ್ರೀಡಾ ಸಚಿವಾಲಯವು ನೂತನ ಆಡಳಿತ ಸಮಿತಿಯನ್ನು ಡಿಸೆಂಬರ್ 24ರಂದು ಅಮಾನತು ಮಾಡಿತ್ತು. ನಿಯಮ ಉಲ್ಲಂಘನೆ ಕಾರಣಕ್ಕೆ ಸಮಿತಿಯನ್ನು ಅಮಾನತು ಮಾಡಲಾಗಿತ್ತು. ಬಳಿಕ ಸರ್ಕಾರದ ನಿರ್ದೇಶನದಂತೆ, ಭಾರತದ ಒಲಿಂಪಿಕ್ ಸಂಸ್ಥೆ (ಐಒಎ)ಯು ಡಬ್ಲ್ಯೂಎಫ್ಐ ದೈನಂದಿನ ವ್ಯವಹಾರಗಳನ್ನು ನೋಡಲು ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದಲ್ಲಿ ಮಾಜಿ ಹಾಕಿ ಆಟಗಾರ ಎಂ ಸೋಮಯ್ಯ ಮತ್ತು ಮಾಜಿ ಶಟ್ಲರ್ ಮಂಜುಷಾ ಕನ್ವರ್ ಒಳಗೊಂಡ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಫೆಬ್ರವರಿ 2ರಿಂದ 5ರ ತನಕ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್ಶಿಪ್ ನಡೆಸುವುದಾಗಿ ಘೋಷಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್ ಸಿಂಗ್, ನಾವು ಈ ತಾತ್ಕಾಲಿಕ ಸಮಿತಿಯನ್ನು ಒಪ್ಪುವುದಿಲ್ಲ. ಶೀಘ್ರದಲ್ಲೇ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್ ಶಿಪ್ ಆಯೋಜಿಸುವುದಾಗಿ ತಿಳಿಸಿದ್ದಾರೆ. ನಾವು ಸಂಸ್ಥೆ ಮೇಲಿನ ಅಮಾನತನ್ನು ಅಂಗೀಕರಿಸುವುದಿಲ್ಲ. ಡಬ್ಲ್ಯೂಎಫ್ಐ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ನಮ್ಮ ಕಾರ್ಯವನ್ನು ಮಾಡುತ್ತಿದ್ದೇವೆ. ರಾಜ್ಯ ಸಂಸ್ಥೆಗಳು ತಮ್ಮ ತಂಡಗಳನ್ನು ಕಳುಹಿಸದಿದ್ದರೆ ಅವರು ಹೇಗೆ ಕುಸ್ತಿ ಚಾಂಪಿಯನ್ ಶಿಪ್ ನಡೆಸುತ್ತಾರೆ. ಈ ಸಂಬಂಧ ನಾವು ನಮ್ಮ ಕಾರ್ಯಕಾರಿ ಸಮಿತಿಯ ಸಭೆ ಕರೆಯುತ್ತೇವೆ. ಸಭೆಯ ನೋಟಿಸ್ನ್ನು ಒಂದೆರಡು ದಿನಗಳಲ್ಲಿ ಕಳುಹಿಸಿಕೊಡಲಾಗುವುದು. ತಾತ್ಕಾಲಿಕ ಸಮಿತಿ ಚಾಂಪಿಯನ್ ಶಿಪ್ ಆಯೋಜಿಸುವ ಮೊದಲು ನಾವು ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.