ನವದೆಹಲಿ :ಚಂದ್ರಯಾನ 3 ರ ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಒಂದು ದಿನದ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಇದೀಗ ಪೆಲೋಡ್ಗಳು ಸ್ವಿಚ್ಡ್ ಆಫ್ ಆಗಿವೆ. ಆದರೆ ಲ್ಯಾಂಡರ್ನ ರಿಸಿವರ್ ಆನ್ ಆಗಿದೆ. ಪ್ರಗ್ಯಾನ್ ಸೋಲರ್ ಫಲಕದಿಂದ ಅದರ ಬ್ಯಾಟರಿ ಚಾರ್ಜ್ ಆಗುವರೆಗೆ ವಿಕ್ರಮ್ ಲ್ಯಾಂಡರ್ ನಿದ್ರೆಗೆ ಜಾರಿರುತ್ತದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೇ, ಇದೀಗ ಚಂದ್ರನ ಹೊಸ ಫೋಟೋವನ್ನು ಹಂಚಿಕೊಂಡಿದೆ.
ಇನ್ನೆರಡು ದಿನದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಕತ್ತಲು ಆವರಿಸಿದೆ. ಹೀಗಾಗಿ, ವಿಕ್ರಂ ಲ್ಯಾಂಡರ್ನ್ನು 8 ಗಂಟೆಯ ವೇಳೆ ಸ್ಲೀಪ್ ಮೋಡ್ಗೆ ಸೆಟ್ ಮಾಡಲಾಗಿದೆ. ಚಂದ್ರನಲ್ಲಿ ಕತ್ತಲು ಆವರಿಸಲಿದ್ದು, ಸೆಪ್ಟೆಂಬರ್ 22ರಂದು ಸೂರ್ಯನ ಬೆಳಕು ಬೀಳಲಿದೆ. ಆಗ ರೋವರ್ನಲ್ಲಿರುವ ಸೌರ ಫಲಕಗಳು ಆ್ಯಕ್ಟಿವ್ ಆಗಲಿದೆ. ಹೀಗಾಗಿ ಇಸ್ರೋ ವಿಜ್ಞಾನಿಗಳು ಸೂರ್ಯನ ಬೆಳಕು ಬೀಳುವ ರೀತಿಯಲ್ಲಿ ರೋವರ್ ಅನ್ನು ವಿಕ್ರಂಗೆ ನಿರ್ದೇಶನ ನೀಡುವ ನಿಲ್ಲಿಸಿದ್ದಾರೆ . ಇದರ ರಿಸೀವರ್ ಆನ್ ಆಗಿದೆ. ಸೆಪ್ಟೆಂಬರ್ 22ರಂದು ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಸ್ಲೀಪ್ ಮೋಡ್ನ ಪ್ರಕ್ರಿಯೆಯ ನಂತರ ಇಸ್ರೋ ಇದೀಗ ಮತ್ತೊಂದು ಮಹತ್ವದ ಪ್ರಯೋಗವನ್ನು ಚಂದ್ರನಲ್ಲಿ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಂ ಇಳಿದ ಶಿವಶಕ್ತಿ ಪಾಯಿಂಟ್ನಿಂದ 40 ಸೆ. ಮೀ ಎತ್ತರಕ್ಕೆ ಹಾರಿಸಿ ಮತ್ತೆ ನಂತರ 30 ರಿಂದ 40 ಸೆ. ಮೀಟರ್ ಪಕ್ಕಕ್ಕೆ ಲ್ಯಾಂಡ್ ಮಾಡಿಸಲಾಗಿದೆ.
ಆದಿತ್ಯ ಎಲ್1 ಉಡಾವಣೆ ಯಶಸ್ವಿಯಾದ ಬಳಿಕ ಚಂದ್ರಯಾನ-3 ಬಗ್ಗೆ ಮಾತನಾಡಿದ್ದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, "ಚಂದ್ರನ ಮೇಲೆ ರಾತ್ರಿ ಆರಂಭವಾಗಲಿದೆ. ಹೀಗಾಗಿ, ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ನಿದ್ರೆಗೆ ಜಾರಲಿವೆ. ರೋವರ್ ಲ್ಯಾಂಡರ್‌ನಿಂದ ಸುಮಾರು 100 ಮೀಟರ್‌ಗಳಷ್ಟು ದೂರ ಚಲಿಸಿದೆ. ಈ ಸಂಬಂಧ ನಮ್ಮ ತಂಡವು ಈಗ ಸಾಕಷ್ಟು ಕೆಲಸ ಮಾಡುತ್ತಿದೆ" ಎಂದು ತಿಳಿಸಿದ್ದರು.
ಚಂದ್ರಯಾನ-3 ಯೋಜನೆಯು 14 ದಿನಗಳ ಮಿಷನ್ ಆಗಿತ್ತು. ಚಂದ್ರನ ಮೇಲಿನ 1 ದಿನ ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ. ರೋವರ್ ಮತ್ತು ಲ್ಯಾಂಡರ್ ಅನ್ನು ಸೂರ್ಯನಿಂದ ಪಡೆಯುವ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ, ಚಂದ್ರನ ಮೇಲೆ ರಾತ್ರಿಯಾದಾಗ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಸ್ಲೀಪ್ ಮೋಡ್ನಲ್ಲಿ ಇಡಲಾಗುತ್ತದೆ. ಆದರೆ, ಅಲ್ಲಿನ ತೀವ್ರ ಚಳಿಯಿಂದಾಗಿ ಸೆಪ್ಟೆಂಬರ್ 22ರವರೆಗೆ ಉಪಕರಣ ಸುರಕ್ಷಿತವಾಗಿದ್ದರೆ ಮತ್ತೆ ಸೌರಶಕ್ತಿಯಿಂದ ಕೆಲಸ ಆರಂಭಿಸಬಹುದು ಎಂದು ಇಸ್ರೋ ಭರವಸೆ ವ್ಯಕ್ತಪಡಿಸಿದೆ.
ಕಳೆದ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ಗಗನನೌಕೆಯನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಉಡಾಯಿಸಿದ್ದರು. ಇದಾದ 41 ದಿನಗಳ ಬಳಿಕ (ಆಗಸ್ಟ್ 23ರಂದು) ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿತ್ತು. ಅಷ್ಟೇ ಅಲ್ಲದೆ, ಈ ಧ್ರುವದ ಮೇಲೆ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸಿದ ಹೆಗ್ಗಳಿಕೆಗೆ ಭಾರತೀಯ ವಿಜ್ಞಾನಿಗಳು ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3: ಕೆಲಸ ಮುಗಿಸಿ 'ಸ್ಲೀಪ್ ಮೋಡ್'ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ