ದೆಹಲಿ:ಪಾಕಿಸ್ತಾನದ ವಿರುದ್ಧ ಭಾರತ ಗೆದ್ದ 1971ರ ಯುದ್ಧ ಇಂದಿಗೆ 51 ವರ್ಷವಾಗಿದೆ. ಅಂದು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದೃಢ ನಿರ್ಧಾರದಿಂದಾಗಿ ಬಾಂಗ್ಲಾದೇಶ ಹೊಸ ರಾಷ್ಟ್ರವಾಗಿ ಉದಯವಾಗಿದ್ದು ಮಾತ್ರವಲ್ಲದೇ ಭಾರತೀಯ ಸೇನೆಯ ಶಕ್ತಿ, ಪರಾಕ್ರಮ ಜಗತ್ತಿಗೆ ಗೊತ್ತಾಗಿತ್ತು.
ಡಿಸೆಂಬರ್ 3ರಂದು ಆರಂಭವಾಗಿದ್ದ ಯುದ್ಧ ಡಿಸೆಂಬರ್ 16ರಂದು ಅಂತ್ಯಗೊಂಡಿತ್ತು. ಈ ಯುದ್ಧದಲ್ಲಿ ಭಾರತ ಜಯಭೇರಿ ಸಾಧಿಸಿ ಇಂದಿಗೆ 51 ವರ್ಷಗಳಾಗಿವೆ. ದೇಶ ವಿಭಜನೆಯಾದ ನಂತರ ಬಾಂಗ್ಲಾದೇಶ ಕೂಡಾ ಪಾಕಿಸ್ತಾನದ ಭಾಗವಾಗಿತ್ತು. 1971ರವರೆಗೆ ಅದನ್ನು ಪೂರ್ವ ಪಾಕಿಸ್ತಾನ ಎಂದೇ ಕರೆಯಲಾಗುತ್ತಿತ್ತು. ಪಾಕಿಸ್ತಾನದ ಸೇನಾಪಡೆಯ ಹಿಂಸಾಚಾರದ ಕಾರಣದಿಂದಾಗಿ ಅಲ್ಲಿನ ಜನರು ಸಾಕಷ್ಟು ತೊಂದರೆಗೆ ಒಳಗಾಗುವಂತಾಗಿತ್ತು.
ಇದು ಭಾರತಕ್ಕೂ ತಲೆನೋವಾಗಿತ್ತು. ಏಕೆಂದರೆ ಲಕ್ಷಾಂತರ ಮಂದಿ ಅಲ್ಲಿನ ಸೇನಾಪಡೆಯ ಹಿಂಸಾಚಾರ ತಾಳಲಾಗದೇ ಭಾರತದೊಳಗೆ ನುಸುಳಿದ್ದರು. ಅಲ್ಲಿಯೂ ಕೂಡಾ ಸೇನೆಯ ವಿರುದ್ಧ ದಂಗೆಗಳು ಆರಂಭವಾಗಿದ್ದು, ಅಲ್ಲಿನ ಪ್ರಬಲ ಪಕ್ಷವಾದ ಅವಾಮಿ ಲೀಗ್ ಕೂಡಾ ಈಗಿನ ಪಾಕಿಸ್ತಾನದ ಸೇನೆಯ ಕಪಿಮುಷ್ಟಿಯಲ್ಲಿ ನರಳುವಂತಾಗಿತ್ತು.
ಈ ವೇಳೆ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಬಾಂಗ್ಲಾ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದರು. ಅವಾಮಿ ಲೀಗ್ನ ಸದಸ್ಯರ ಬಂಧನದ ಜೊತೆಗೆ, ಸಾಕಷ್ಟು ಮಂದಿ ಭಾರತಕ್ಕೆ ಪಲಾಯನ ಮಾಡಿದ್ದರು. ಕೆಲವರನ್ನು ಬಂಧಿಸಿ, ಈಗಿನ ಪಾಕಿಸ್ತಾನವಾದ ಆಗಿನ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿತ್ತು.
ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆ ಇಂದಿರಾಗಾಂಧಿ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡಿದ್ದರು. ಭಾರತ ಮತ್ತು ಬಾಂಗ್ಲಾದ ಗಡಿಗಳಲ್ಲಿ ನಿರಾಶ್ರಿತರಿಗೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು. ಪಶ್ಚಿಮ ಬಂಗಾಳ, ಅಸ್ಸೋಂ, ಬಿಹಾರ, ಮೇಘಾಲಯ ಮುಂತಾದ ಕಡೆಗಳಲ್ಲಿ ನಿರಾಶ್ರಿತರ ಕೇಂದ್ರಗಳು ಆರಂಭವಾಗಿದ್ದವು.