ಕರ್ನಾಟಕ

karnataka

ವಿಜಯ್​ ದಿವಸ್​: ಭಾರತದ ಮುಂದೆ ಮಂಡಿಯೂರಿದ್ದ ಪಾಕಿಸ್ತಾನದ 93 ಸಾವಿರ ಸೈನಿಕರು.. ಇತಿಹಾಸ ತಿಳಿಯಿರಿ

By ETV Bharat Karnataka Team

Published : Dec 16, 2023, 6:18 PM IST

Bangladesh Liberation Day: 1971ರ ಡಿಸೆಂಬರ್​ 16 ರಂದು ಪಾಕ್​ ಭಾರತದ ಮುಂದೆ ಸೋಲೊಪ್ಪಿಕೊಂಡು 14 ದಿನಗಳ ಯುದ್ಧ ಅಂತ್ಯಗೊಂಡಿತ್ತು. ಜೊತೆಗೆ ಪಶ್ಚಿಮ ಪಾಕಿಸ್ತಾನದಿಂದ ವಿಮೋಚನೆಗೊಂಡು ಬಾಂಗ್ಲಾದೇಶ ಪ್ರತ್ಯೇಕ ರಾಷ್ಟ್ರವಾಗಿ ರೂಪುಗೊಂಡಿತು.

Bangladesh Liberation Day
ಬಾಂಗ್ಲಾದೇಶ ವಿಮೋಚನಾ ದಿನ

ನವದೆಹಲಿ: 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ಸಾಧಿಸಿದ ವಿಜಯದ ಸ್ಮರಣಾರ್ಥ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್​ 16 ರಂದು ವಿಜಯ್​ ದಿವಸ್​ ಅನ್ನು ಆಚರಿಸಲಾಗುತ್ತದೆ.

ಇಂದು ದೇಶದ ಇತಿಹಾಸದಲ್ಲಿ ಮರೆಯಲಾಗದ ದಿನ. 14 ದಿನಗಳ ಯುದ್ಧದ ಬಳಿಕ ಭಾರತವು 1971ರ ಡಿಸೆಂಬರ್​ 16 ರಂದು ಪಾಕಿಸ್ತಾನದ ವಿರುದ್ಧ ಅದ್ಭುತ ವಿಜಯ ಸಾಧಿಸಿತ್ತು. ಮಾತ್ರವಲ್ಲದೇ ಈ ಹಿಂದಿನ ಪೂರ್ವ ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶ ಪ್ರತ್ಯೇಕ ರಾಷ್ಟ್ರವಾಗಿ ರೂಪುಗೊಳ್ಳಲು ಕಾರಣವಾಗಿತ್ತು. ಅಂತಹ ಐತಿಹಾಸಿಕ ದಿನವನ್ನು ನಾವು ಪ್ರತೀ ವರ್ಷ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ.

ಭಾರತ ಹಾಗೂ ಬಾಂಗ್ಲಾದೇಶದ ಸಂಯೋಜಿತ ಪಡೆಗಳಿಗೆ ಪಾಕಿಸ್ತಾನದ ಸೇನೆ​ ಶರಣಾಗುವುದರೊಂದಿಗೆ ಯುದ್ಧ ಕೊನೆಗೊಂಡಿತ್ತು. ಈ ಮಹತ್ವದ ದಿನದಂದು ತಮ್ಮ 93,000 ಸೈನಿಕರೊಂದಿಗೆ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್​ ಅಮೀರ್​ ಅಬ್ದುಲ್ಲಾ ಖಾನ್​ ನಿಯಾಜಿ ಭಾರತೀಯ ಸೇನೆಯ ಮುಂದೆ ಶರಣಾಗಿದ್ದರು.

ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಮುಕ್ತಿ ಬಹನಿ ಅವರ ಜೊತೆಗೆ ನಮ್ಮ ಭಾರತೀಯ ಸೇನಾ ಪಡೆಗಳು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಯುದ್ಧದಲ್ಲಿ ಹೋರಾಟ ಮಾಡಿತ್ತು. ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾದ 1971ರ ಯುದ್ಧದಲ್ಲಿ ಭಾರತದ ವಿಜಯದ ನೆನಪಿಗಾಗಿ ಪ್ರತಿ ವರ್ಷ ವಿಜಯ್​ ದಿವಸ್​ ಆಚರಿಸಿದರೆ, ಬಾಂಗ್ಲಾದೇಶ 'ಬಿಜೋಯ್​ ಡಿಬೋಸ್​' ಎಂದು ಆಚರಿಸುತ್ತದೆ.

ವಿಜಯ್​ ದಿವಸ್​ ಮಹತ್ವ: ಈ ಯುದ್ಧದಲ್ಲಿ ಹೋರಾಡಿದ ಸೈನಿಕರ ಶೌರ್ಯ, ತ್ಯಾಗವನ್ನು ಸ್ಮರಿಸುವ ಸಲುವಾಗಿ, ಹುತಾತ್ಮರಿಗೆ ಗೌರವ ಸಲ್ಲಿಸುವ ದಿನವಾಗಿ ಈ ದಿನವನ್ನು ವಿಜಯ್​ ದಿವಸ್​ ಆಗಿ ಆಚರಿಸಲಾಗುತ್ತಿದೆ. ಭಾರತದ ಇತಿಹಾಸದಲ್ಲಿ ಪ್ರಮುಖ ಅಧ್ಯಾಯವಾಗಿರುವ ಈ ದಿನವನ್ನು ಭಾರತದಾದ್ಯಂತ, ವಿಶೇಷವಾಗಿ ದೆಹಲಿ ಹಾಗೂ ಕೊಲ್ಕತ್ತಾದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಪೂರ್ವ ಪಾಕಿಸ್ತಾನದಲ್ಲಿ ಭಾಷೆಗಾಗಿ ಎದ್ದಿತ್ತು ಪ್ರತಿಭಟನಾ ಅಲೆ: 1947ರಲ್ಲಿ ಭಾರತದಿಂದ ವಿಭಜನೆಯಾದ ನಂತರ ಪಾಕಿಸ್ತಾನ ಭೌಗೋಳಿಕವಾಗಿ ಎರಡು ಭಾಗಗಳಾಗಿ ವಿಂಗಡನೆಯಾಯಿತು. ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನ ಎಂದಾಯಿತು. ಅದರಲ್ಲಿ ಪೂರ್ವ ಪಾಕಿಸ್ತಾನ ಇಂದಿನ ಬಾಂಗ್ಲಾದೇಶ. ಈ ಪೂರ್ವ ಪಾಕಿಸ್ತಾನದಲ್ಲಿ ಶೇಕಡಾ 56 ರಷ್ಟು ಮಂದಿ ಬಂಗಾಳಿ ಭಾಷಿಕರೇ ವಾಸಿಸುತ್ತಿದ್ದರು. ಆದರೆ, ಪಾಕಿಸ್ತಾನ ಸರ್ಕಾರ ಮಾತ್ರ ಉರ್ದುವನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿತ್ತು. ಇಲ್ಲಿಂದ ಪೂರ್ವ ಪಾಕಿಸ್ತಾನದಲ್ಲಿ ಪ್ರತಿಭಟನೆಯ ಅಲೆ ಎದ್ದಿತ್ತು.

ನಂತರದಲ್ಲಿ ಪಾಕಿಸ್ತಾನಿ ಜನರು ಭಾಷೆ, ಪ್ರಾಂತ್ಯ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಿಷಯಗಳ ಮೇಲೆ ವಿಭಜಿಸಲ್ಪಟ್ಟರು. ಪೂರ್ವ ಪಾಕಿಸ್ತಾನದಲ್ಲಿ ಎದ್ದಿದ್ದ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಪಾಕಿಸ್ತಾನದ ಸೈನ್ಯ ತನ್ನದೇ ಪ್ರಜೆಗಳ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿತ್ತು. ಇದರಿಂದಾಗಿ ಪೂರ್ವ ಪಾಕಿಸ್ತಾನದ ನಾಗರಿಕರು ಭಾರತದ ಕಡೆಗೆ ವಲಸೆ ಬರಲು ಆರಂಭಿಸಿದ್ದರು. ಇದು ಭಾರತ ಸರ್ಕಾರಕ್ಕೆ ತೀವ್ರ ಕಳವಳವನ್ನುಂಟು ಮಾಡಿತ್ತು. ಆಗ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಪಾಕಿಸ್ತಾನದಿಂದ ಬಾಂಗ್ಲಾದೇಶದ ವಿಮೋಚನೆ ನಿರ್ಧಾರವನ್ನು ಕೈಗೊಂಡಿದ್ದರು. ಬಾಂಗ್ಲಾದೇಶದ ಸೇನೆಗೆ ಭಾರತೀಯ ಸೈನಿಕರು ಬೆಂಬಲವನ್ನು ಸೂಚಿಸುವ ನಿರ್ಧಾರವನ್ನು ಇಂದಿರಾಗಾಂಧಿ ಪ್ರಕಟಿಸಿದ್ದರು.

ಭಾರತದ ಮುಂದೆ ಸೋಲೊಪ್ಪಿಕೊಂಡ ಪಾಕಿಸ್ತಾನ ಸೇನೆ: 14 ದಿನಗಳ ಕಾಲ ಯುದ್ಧ ನಡೆದು, ಡಿಸೆಂಬರ್​ 16 ರಂದು ಪಾಕಿಸ್ತಾನ ಸೇನೆಯು ಹೀನಾಯ ಸೋಲನ್ನು ಒಪ್ಪಿಕೊಂಡು ಭಾರತೀಯ ಸೇನೆಗೆ ಶರಣಾಯಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಸ್ಥಾಪನೆಯಾದ 25 ವರ್ಷಗಳಲ್ಲಿ ಮತ್ತೊಂದು ವಿಭಜನೆಯಾಯಿತು. ಜೊತೆಗೆ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶ ರೂಪದಲ್ಲಿ ಹೊಸ ರಾಷ್ಟ್ರವಾಯಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಭಾರತದ ಸೇನಾ ಮುಖ್ಯಸ್ಥ ಜನರಲ್​ ಸ್ಯಾಮ್​ ಮಾನೆಕ್ಷಾ ಅವರ ನಾಯಕತ್ವದಲ್ಲಿ ಯುದ್ಧ ಗೆದ್ದು ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂತು. ಸ್ಯಾಮ್​ ಮಾನೆಕ್ಷಾ ಅವರು ಫೀಲ್ಡ್​ ಮಾರ್ಷಲ್​ ಪದವಿಯನ್ನು ಪಡೆದ ಸ್ವತಂತ್ರ ಭಾರತದ ಮೊದಲ ಸೇನಾಧಿಕಾರಿ.

ಯುದ್ಧಕ್ಕೆ ನಾಂದಿ ಹಾಡಿದ್ದ ಪಾಕಿಸ್ತಾನ:ಪೂರ್ವ ಪಾಕಿಸ್ತಾನದ ಮೇಲೆ ಪಶ್ಚಿಮ ಪಾಕಿಸ್ತಾನದ ದಬ್ಬಾಳಿಕೆ ನೀತಿಯಿಂದಾಗಿ 10 ಮಿಲಿಯನ್​ಗಿಂತಲೂ ಹೆಚ್ಚು ನಾಗರಿಕರು ಭಾರತಕ್ಕೆ ವಲಸೆ ಬಂದಿದ್ದರು. ಇದನ್ನು ತಡೆಯಲು ಇದ್ದ ಎಲ್ಲ ಆಯ್ಕೆಗಳು ಫಲ ಕೊಡದೇ ಇದ್ದಾಗ ಭಾರತ ಮಿಲಿಟರಿ ಕಾರ್ಯಾಚರಣೆಯ ಮೊರೆ ಹೋಗಿತ್ತು. 1971ರ ಡಿಸೆಂಬರ್​ 3 ರಂದು ಭಾರತೀಯ ವಾಯುನೆಲೆಗಳ ಮೇಲೆ ಪಾಕಿಸ್ತಾನ ವಾಯುದಾಳಿ ಮಾಡಿದ್ದು, ಸಂಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಿತ್ತು.

93,000 ಪಾಕಿಸ್ತಾನಿ ಸೈನಿಕರು ಶರಣಾಗತಿ: ಡಿಸೆಂಬರ್​ 16 ರಂದು ಪಾಕಿಸ್ತಾನಿ ಸೇನಾ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಅಮೀರ್​ ಅಬ್ದುಲ್ಲಾ ಖಾನ್​ ನಿಯಾಜಿ ಅವರು ಭಾರತೀಯ ಸೇನೆಯ ಹಿರಿಯ ಅಧಿಕಾರಿ ಲೆಫ್ಟಿನೆಂಟ್​ ಜನರಲ್​ ಜಗಜಿತ್​ ಸಿಂಗ್​ ಅರೋರಾ ಅವರ ಜೊತೆಗೆ ಶಾರಣಾಗತಿ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾರ್ವಜನಿಕವಾಗಿ ತಮ್ಮ ಸೋಲನ್ನು ಒಪ್ಪಿಕೊಂಡರು. 93 ಸಾವಿರ ಪಾಕಿಸ್ತಾನ ಸೈನಿಕರು ಶರಣಾಗಿದ್ದರು. ಯುದ್ಧದ ಇತಿಹಾಸದಲ್ಲೇ ಹಿಂದೆಂದೂ ಇಷ್ಟು ದೊಡ್ಡ ಸಂಖ್ಯೆಯ ಸೈನಿಕರು ಶರಣಾಗಿರಲಿಲ್ಲ. ಯುದ್ಧದಲ್ಲಿ ಭಾರತೀಯ ಸೇನೆಯು ಪಶ್ಚಿಮ ಮುಂಭಾಗದಲ್ಲಿ 15,000 ಚದರ ಕಿ.ಮೀ ಪಾಕಿಸ್ತಾನದ ಭೂಪ್ರದೇಶವನ್ನು ವಶಪಡಿಸಿಕೊಂಡಿತ್ತು. ಇದರೊಂದಿಗೆ ಪಾಕಿಸ್ತಾನದಲ್ಲಿ ಯಾಹ್ಯಾ ಖಾನ್​ ಆಡಳಿತ ಪತನಗೊಂಡು, ಅಧ್ಯಕ್ಷರಾಗಿ ಜೆಡ್​.ಎ.ಭುಟ್ಟೋ ಪ್ರಮಾಣವಚನ ಸ್ವೀಕರಿಸಿದ್ದರು.

ಯುದ್ಧದಲ್ಲಿ 2,908 ಸೈನಿಕರು ಹುತಾತ್ಮ: 14 ದಿನಗಳ ಯುದ್ಧದಲ್ಲಿ ಒಟ್ಟು 2908 ಸೈನಿಕರು ಹುತಾತ್ಮರಾಗಿದ್ದು, 1,200ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದರು. ಭಾರತೀಯ ಸೇನೆಯ ಸುಮಾರು 600 ಅಧಿಕಾರಿಗಳು ಹಾಗೂ ಸೈನಿಕರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪೈಕಿ 4 ಮಂದಿಗೆ ಪರಮವೀರ ಚಕ್ರ, 76 ಮಂದಿಗೆ ಮಹಾವೀರ ಚಕ್ರ ಹಾಗೂ 513 ಮಂದಿಗೆ ವೀರಚಕ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ:ಲಡಾಖ್​ನಲ್ಲಿ ಕಾರ್ಗಿಲ್​ ವಿಜಯ​ ದಿನ​ ಆಚರಣೆಗೆ ಸಿದ್ಧತೆ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿ

ABOUT THE AUTHOR

...view details