ಆಲಪ್ಪುಳ (ಕೇರಳ): ಭೀಕರ ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಕೇರಳ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈಗಾಗಲೇ 23 ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಈ ಪ್ರವಾಹದ ನಡವೆ ಜೋಡಿಯೊಂದು ಮದುವೆ ಮುಂದೂಡದೆ ವಿಭಿನ್ನ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರವಾಹದ ಮಧ್ಯೆ ಗಮನ ಸೆಳೆದ ವಿಶೇಷ ಮದುವೆ ಕಳೆದ ಒಂದು ವರ್ಷದಿಂದ ಆಲಪ್ಪುಳ ಜಿಲ್ಲೆಯ ನಿವಾಸಿಗಳಾದ ಆಕಾಶ್ ಮತ್ತು ಐಶ್ವರ್ಯ ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಅವರ ವಿವಾಹ ನಿಶ್ಚಯವಾಗಿದ್ದು, ತಾಳವಾಡಿ ಪನ್ನಯಣ್ಣೂರ್ಕಾವು ದೇವಿ ದೇವಸ್ಥಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕೆಲವೇ ಕಲೆವು ಬಂಧು-ಮಿತ್ರರಿಗೆ ಆಮಂತ್ರಣ ನೀಡಲಾಗಿತ್ತು.
ಇದನ್ನೂ ಓದಿ: ಮಳೆಗೆ ನಲುಗಿದ ಕೇರಳ, ಸಾವಿನ ಸಂಖ್ಯೆ 23ಕ್ಕೆ ಏರಿಕೆ.. ಮೋದಿ ನೆರವಿನ ಅಭಯ
ಆದರೆ ಕಳೆದ ಕೆಲ ದಿನಗಳಿಂದ ಆಲಪ್ಪುಳ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಸಮಯಕ್ಕೆ ಸರಿಯಾಗಿ ಮದುವೆ ನಡೆಯಲು ನಾನಾ ಅಡ್ಡಿಗಳು ಎದುರಾಗಿದ್ದವು. ಇದಕ್ಕಾಗಿ ವಧು-ವರರ ಪೋಷಕರು ಮದುವೆ ಮಂಟಪಕ್ಕೆ ಈ ಜೋಡಿಯನ್ನು ಪ್ರವಾಹದ ನೀರಿನಲ್ಲಿ ದೊಡ್ಡದಾದ ಅಡುಗೆ ಪಾತ್ರೆಯಲ್ಲಿ ಕೂರಿಸಿ ಕರೆತಂದಿದ್ದಾರೆ. ಸುಮಾರು ಅರ್ಧ ಕಿಲೋ ಮೀಟರ್ವರೆಗೆ ಪಾತ್ರೆಯೇ ಇವರಿಗೆ ವೆಡ್ಡಿಂಗ್ ಕಾರ್ ಆಗಿತ್ತು. ಕೊನೆಗೂ ಮುಹೂರ್ತಕ್ಕೆ ಸರಿಯಾಗಿ ಈ ಜೋಡಿ ಹಸೆಮಣೆ ಏರಿತು.