ನವದೆಹಲಿ:ದೇಶಕ್ಕೆ ಪ್ರತಿದಿನ 1.25 ಕೋಟಿ ಕೋವಿಡ್ ಲಸಿಕೆಯ ಡೋಸ್ ನೀಡುವ ಸಾಮರ್ಥ್ಯವಿದೆ ಎಂದು ಪ್ರತಿಪಾದಿಸಿರುವ ಕೇಂದ್ರವು ಮುಂದಿನ ದಿನಗಳಲ್ಲಿ ಲಸಿಕೆ ಪೂರೈಕೆಯ ಬಗ್ಗೆ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಮುಂದಿನ ತಿಂಗಳು ಸುಮಾರು 20-22 ಕೋಟಿ ಡೋಸ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.
ಭಾರತದ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದ ಅಧ್ಯಕ್ಷ (ಎನ್‌ಟಿಎಜಿ) ಡಾ. ಎನ್.ಕೆ. ಅರೋರಾ ಈ ಘೋಷಣೆ ಮಾಡಿದ್ದಾರೆ.
ಹೊಸ ವ್ಯಾಕ್ಸಿನೇಷನ್ ನೀತಿಯಡಿ ಸೋಮವಾರ ಮಧ್ಯರಾತ್ರಿಯವರೆಗೆ ದೇಶಾದ್ಯಂತ 85 ಲಕ್ಷ ಡೋಸ್‌ಗಳನ್ನು ನೀಡಲಾಗಿದ್ದು, ಇದರಲ್ಲಿ ಕೇಂದ್ರವು ದೇಶೀಯವಾಗಿ ಲಭ್ಯವಿರುವ ಶೇಕಡಾ 75ರಷ್ಟು ಲಸಿಕೆಗಳನ್ನು 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ನೀಡಲು ಖರೀದಿಸುತ್ತಿದೆ. ಈ ಅಂಶವನ್ನು ಪರಿಗಣಿಸಿ ಅರೋರಾ ಈ ಹೊಸ ಘೋಷಣೆ ಮಾಡಿದ್ದಾರೆ.
“ಪ್ರತಿದಿನ ಕನಿಷ್ಠ ಒಂದು ಕೋಟಿ ಜನರಿಗೆ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ. ಪ್ರತಿದಿನ 1.25 ಕೋಟಿ ಡೋಸ್ ಕೋವಿಡ್ -19 ಲಸಿಕೆಯನ್ನು ಸುಲಭವಾಗಿ ನೀಡುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
“ಖಾಸಗಿ ವಲಯದ ಉತ್ತಮ ಬೆಂಬಲದ ಹಿನ್ನೆಲೆಯಲ್ಲಿ ಈ ಗುರಿಯನ್ನು ವಿಶೇಷವಾಗಿ ಸಾಧಿಸಬಹುದು ಮತ್ತು ಪರಿಷ್ಕೃತ ಮಾರ್ಗಸೂಚಿಗಳು ಜಾರಿಗೆ ಬಂದ ಮೊದಲ ದಿನವೇ ಇದು ಸಾಬೀತಾಗಿದೆ. ಲಸಿಕೆ ಲಭ್ಯತೆಯ ಬಗ್ಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಮುಂದಿನ ತಿಂಗಳು ನಾವು ಸುಮಾರು 20-22 ಕೋಟಿ ಡೋಸ್ ಲಸಿಕೆ ಹೊಂದಲಿದ್ದೇವೆ” ಎಂದು ಎನ್‌ಟಿಎಜಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.
“ಗುಡ್ಡಗಾಡು, ಬುಡಕಟ್ಟು ಮತ್ತು ವಿರಳ ಜನಸಂಖ್ಯೆ ಇರುವ ಪ್ರದೇಶಗಳು ಸೇರಿದಂತೆ ವ್ಯಾಕ್ಸಿನೇಷನ್ ಡ್ರೈವ್ ಅನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ಆರೋಗ್ಯ ಮೂಲಸೌಕರ್ಯಗಳು ಉತ್ತಮವಾಗಿ ಹರಡಿವೆ” ಎಂದು ಅರೋರಾ ಭರವಸೆ ನೀಡಿದರು.
ಈ ಹಿಂದೆ ಭಾರತವು ಹೇಗೆ ಯಶಸ್ವಿಯಾಗಿದೆ ಎಂಬುದರ ಕುರಿತು ಮಾತನಾಡಿದ ಅರೋರಾ, "ಇದು ಅಭೂತಪೂರ್ವವಲ್ಲ. ಒಂದು ವಾರದಲ್ಲಿ ನಾವು ಸುಮಾರು 17 ಕೋಟಿ ಮಕ್ಕಳಿಗೆ ಪೋಲಿಯೋ ಲಸಿಕೆಗಳನ್ನು ನೀಡುತ್ತೇವೆ. ಆದ್ದರಿಂದ, ಭಾರತ ಏನನ್ನಾದರೂ ಮಾಡಲು ನಿರ್ಧರಿಸಿದರೆ, ಅದನ್ನು ಸಾಧಿಸಲು ಸಾಧ್ಯವಾಗುತ್ತದೆ" ಎಂದರು.