ಹೈದ್ರಾಬಾದ್ :ಕೊರೊನಾ ಸಾಂಕ್ರಾಮಿಕವನ್ನು ಹತ್ತಿಕ್ಕಲು ಇರುವ ಏಕೈಕ ಮಾರ್ಗವೆಂದರೆ ಸಂಪೂರ್ಣ ವ್ಯಾಕ್ಸಿನೇಷನ್. ಕೊರೊನಾ ವೈರಸ್ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ. ಪ್ರಬಲ ರೂಪಾಂತರಗಳನ್ನು ಅರ್ಥಮಾಡಿಕೊಳ್ಳಲು ಜೀನೋಮ್ ಅನುಕ್ರಮವನ್ನು ಮಾಡಬೇಕು.
ಎರಡನೇ ಅಲೆಯಿಂದ ಉಂಟಾಗಿರುವ ಹಾನಿಗೆ ಒಂದು ಕಾರಣವೆಂದರೆ ಜೀನೋಮ್ ಅನುಕ್ರಮವನ್ನು ವಿಶ್ಲೇಷಿಸುವಲ್ಲಿನ ನಿರ್ಲಕ್ಷ್ಯ.
ವಿನಾಶಕಾರಿ ಮೂರನೇ ಅಲೆಯನ್ನು ತಡೆಗಟ್ಟುವಲ್ಲಿ ನಾವು ಪೂರ್ವಭಾವಿಯಾಗಿರಬೇಕು ಎಂದು ICMRನ ವೈರಾಲಜಿ ಸೆಂಟರ್ ಫಾರ್ ಅಡ್ವಾನ್ಸ್ ರಿಸರ್ಚ್ನ ಮಾಜಿ ಮುಖ್ಯಸ್ಥ ಜಾಕೋಬ್ ಜಾನ್ ಹೇಳಿದ್ದಾರೆ.
ಈಟಿವಿ ಭಾರತ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು ಸೋಂಕಿನ ತೀವ್ರತೆ ಮತ್ತು ಮೂರನೇ ಅಲೆಯ ಬಗ್ಗೆ ಮಾತನಾಡಿದ್ದಾರೆ.
ಪ್ರಶ್ನೆ: ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಎರಡನೇ ಅಲೆ ಏಕೆ ತೀವ್ರವಾಗಿದೆ?
ಜಾಕೋಬ್ ಜಾನ್ :ಎರಡು ಅಂಶಗಳು ಈ ತೀವ್ರತೆಗೆ ಕಾರಣವಾಗಿದ್ದು, ಮೊದಲನೆಯದಾಗಿ, ರೂಪಾಂತರ ಅಥವಾ ಹರಡುವಿಕೆಯ ತೀವ್ರತೆಯನ್ನು ನಾವು ಕಂಡು ಹಿಡಿಯಲಾಗಲಿಲ್ಲ.
ಈ ಸಮಸ್ಯೆ ಮೇಲ್ವಿಚಾರಣೆ ಮಾಡಲು ಕೇಂದ್ರವು 10 ಸಂಶೋಧನಾ ಪ್ರಯೋಗಾಲಯಗಳಿಗೆ ಜವಾಬ್ದಾರಿವಹಿಸಿದೆ. ಅವರು ಜೀನೋಮ್ ಅನುಕ್ರಮವನ್ನು ಕೈಗೊಳ್ಳಲು ಸಾಕಷ್ಟು ಹಣವಿಲ್ಲ.
ಎರಡನೆಯದಾಗಿ, ದೇಶಾದ್ಯಂತ ಸಾಮೂಹಿಕ ಕಾರ್ಯಕ್ರಮಗಳನ್ನು ಸರ್ಕಾರ ನಿರ್ಬಂಧಿಸಲಿಲ್ಲ. ಚುನಾವಣಾ ರ್ಯಾಲಿಗಳು ಮತ್ತು ಪ್ರಚಾರಗಳು ಸಹ ಇದು ತೀವ್ರವಾಗಿ ಹರಡಲು ಕಾರಣವಾಗಿವೆ.
ಪ್ರಶ್ನೆ:ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳಿವೆ. ನಿಮ್ಮ ಅಭಿಪ್ರಾಯ ಏನು?
ಜಾಕೋಬ್ ಜಾನ್ :ಲಸಿಕೆ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬ ಬಗ್ಗೆ ಯಾವುದೇ ಅಂಕಿ-ಅಂಶಗಳ ಆಧಾರವಿಲ್ಲ. ಆದರೆ, ಲಸಿಕೆಗಳು ಖಂಡಿತವಾಗಿಯೂ ಹೆಚ್ಚುವರಿ ರಕ್ಷಣೆ ನೀಡುತ್ತದೆ.
ಆದಾಗ್ಯೂ, ನಾವು ಸಾಕಷ್ಟು ಪ್ರಮಾಣವನ್ನು ಪೂರೈಸುವಲ್ಲಿ ವಿಫಲರಾಗಿದ್ದೇವೆ. ಎರಡು ಡೋಸ್ ಪಡೆದವರಿಗೆ ವೈರಸ್ ವಿರುದ್ಧ ಉತ್ತಮ ರಕ್ಷಣೆ ಇದೆ ಎಂಬುದರಲ್ಲಿ ಸಂದೇಹವಿಲ್ಲ.
ಪ್ರಶ್ನೆ: ಪ್ರಸ್ತುತ ಪರಿಸ್ಥಿತಿಯಲ್ಲಿ ಜೀನೋಮ್ ಅನುಕ್ರಮದ ಪಾತ್ರವೇನು?
ಜಾಕೋಬ್ ಜಾನ್ :ಮೊದಲ ಅಲೆಗಿಂತ ಕೆಲವು ವೈರಸ್ನ ರೂಪಾಂತರಗಳು ಮಾರಕವಾಗಿವೆ. ವ್ಯಾಕ್ಸಿನೇಷನ್ಗೆ ವಿರೋಧ ಒಡ್ಡಬಲ್ಲ ಹೊಸ ರೂಪಾಂತರಗಳು ಸಹ ವಿಕಸನಗೊಳ್ಳುತ್ತಿವೆ. ನಾವು ಆ ಬಗ್ಗೆ ಯೋಚಿಸಬೇಕು.