ಕರ್ನಾಟಕ

karnataka

ETV Bharat / bharat

ಉತ್ತರಕಾಶಿ ಸುರಂಗ ಕುಸಿತ: 11ನೇ ದಿನದ ರಕ್ಷಣಾ ಕಾರ್ಯಾಚರಣೆ; ಹೊಸ ರಸ್ತೆ ನಿರ್ಮಾಣ, ಆಂಬ್ಯುಲೆನ್ಸ್‌ಗಳು ರೆಡಿ - rescue operation

Uttarkashi tunnel collapse update: ಘಟನಾ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪ್ರಧಾನಿ ಮೋದಿ ಅವರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ದೂರವಾಣಿ ಮೂಲಕ ನೀಡುತ್ತಿದ್ದಾರೆ.

Uttarkashi tunnel collapse rescue operation
ಉತ್ತರಕಾಶಿ ಸುರಂಗ ಕುಸಿತ: ಸ್ಥಳದಲ್ಲಿ ಸಕಲ ಸಿದ್ಧತೆಯೊಂದಿಗೆ ತಯಾರಿರುವ ಆಂಬ್ಯುಲೆನ್ಸ್​

By ETV Bharat Karnataka Team

Published : Nov 22, 2023, 2:20 PM IST

ಉತ್ತರಕಾಶಿ(ಉತ್ತರಾಖಂಡ): ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರಿಗಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಬಗ್ಗೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಅವರು, ಪ್ರಧಾನಿ ಮೋದಿ ಅವರಿಗೆ ಕ್ಷಣಕ್ಷಣದ ಮಾಹಿತಿಯನ್ನು ನೀಡುತ್ತಿದ್ದಾರೆ. ರಕ್ಷಣಾ ಕಾರ್ಯ 11ನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರಿಗೆ ಆಹಾರ, ಔಷಧಗಳನ್ನು ಪೈಪ್‌ ಮೂಲಕ ರವಾನಿಸಲಾಗುತ್ತಿದೆ. ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಇಂದು ಪ್ರಧಾನಿ ಜೊತೆ ದೂರವಾಣಿಯಲ್ಲಿ ಮಾತನಾಡಿ ರಕ್ಷಣಾ ಕಾರ್ಯಚರಣೆ ಬಗ್ಗೆ ಮಾಹಿತಿ ನೀಡಿರುವುದಾಗಿ ಸಿಎಂ ಧಾಮಿ ಎಕ್ಸ್​ನಲ್ಲಿ ಪೋಸ್ಟ್​ ಹಾಕಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ, ಔಷಧ ಹಾಗೂ ಇತರ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಕೇಂದ್ರೀಯ ಸಂಸ್ಥೆಗಳು, ಅಂತರರಾಷ್ಟ್ರೀಯ ತಜ್ಞರು ಹಾಗೂ ರಾಜ್ಯ ಆಡಳಿತದ ನಡುವೆ ಪರಸ್ಪರ ಸಮನ್ವಯತೆಯೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಸಾಧಿಸಿದ ಸಕಾರಾತ್ಮಕ ಪ್ರಗತಿ, ಕಾರ್ಮಿಕರ ಜೊತೆಗೆ ಅವರ ಕುಟುಂಬದವರು ಮಾತುಕತೆ ನಡೆಸಿರುವ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಗಿದೆ. ಇದರ ಜೊತೆಗೆ ಈ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಪ್ರಧಾನಿ ಅವರಿಂದಲೂ ನಿರಂತರ ಮಾರ್ಗದರ್ಶನವನ್ನು ಪಡೆಯುತ್ತಿದ್ದೇವೆ ಎಂದು ಎಕ್ಸ್​ನಲ್ಲಿ ತಿಳಿಸಿದ್ದಾರೆ.

ಸ್ಥಳದಲ್ಲಿ ಸಿದ್ಧವಾಗಿರುವ ಆಂಬ್ಯುಲೆನ್ಸ್​ಗಳು: ನವೆಂಬರ್​ 12 ರಂದು ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದು 41 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡರು. ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಸ್ಥಳದಲ್ಲಿ ಆಂಬ್ಯುಲೆನ್ಸ್​ಗಳನ್ನು ತಯಾರಾಗಿರಿಸಲಾಗಿದೆ.

ಆಂಬ್ಯುಲೆನ್ಸ್​ ಚಾಲಕ ನವೀನ್​ ಮಾತನಾಡಿ, "ಇಲ್ಲಿಯವರೆಗೆ ನಾಲ್ಕು ಆಂಬ್ಯುಲೆನ್ಸ್​ಗಳು ಸ್ಥಳದಲ್ಲಿ ಸಕಲ ಸಿದ್ಧತೆಗಳೊಂದಿಗೆ ನಿಂತಿವೆ. ಡೆಹ್ರಾಡೂನ್​, ಹರಿದ್ವಾರ ಹಾಗೂ ತೆಹ್ರಿಯಿಂದ ಕಳುಹಿಸಲಾದ 35-36 ಆಂಬ್ಯುಲೆನ್ಸ್​ಗಳು ಶೀಘ್ರದಲ್ಲೇ ಸ್ಥಳಕ್ಕೆ ಬರಲಿವೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗುವ ನಾಲ್ಕು ಗಂಟೆಗಳ ಮೊದಲು ಎಲ್ಲಾ ಆಂಬ್ಯುಲೆನ್ಸ್​ಗಳು ಸ್ಥಳದಲ್ಲಿ ಹಾಜರಿರುತ್ತವೆ" ಎಂದು ಹೇಳಿದರು.

ಆಂಬ್ಯುಲೆನ್ಸ್​ ಸಿಬ್ಬಂದಿ ಹರೀಶ್​ ಪ್ರಸಾದ್​ ಮಾತನಾಡಿ, "ಆಂಬ್ಯುಲೆನ್ಸ್​ಗಳಲ್ಲಿ ಆಕ್ಸಿಜನ್​ ಸಿಲಿಂಡರ್​, ಮಾಸ್ಕ್​, ಸ್ಟ್ರೆಚರ್​, ಬಿಪಿ ತಪಾಸಣೆ ಸೇರಿದಂತೆ ಎಲ್ಲಾ ಯಂತ್ರ ಸೌಲಭ್ಯ ಹಾಗೂ ವ್ಯವಸ್ಥೆಗಳನ್ನು ಮಾಡಲಾಗಿದೆ. 40- 41 ಆಂಬ್ಯುಲೆನ್ಸ್​ಗಳ ಬೇಡಿಕೆ ಇತ್ತು. ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿದೆ" ಎಂದರು.

ಬಿಆರ್​ಒ ಮೇಜರ್​ ನಮನ್​ ನರುಲಾ ಮಾಹಿತಿ ನೀಡಿ, "ಸುಮಾರು 1,200 ಮೀಟರ್​ ರಸ್ತೆ ನಿರ್ಮಿಸಲಾಗಿದ್ದು, ಎರಡು ಡ್ರಿಲ್ಲಿಂಗ್​ ಮೆಷಿನ್​ ವಾಹನಗಳು ಸಹ ಸುರಂಗದ ಸ್ಥಳಕ್ಕೆ ತಲುಪಿವೆ. 48 ಗಂಟೆಗಳ ಒಳಗೆ ನಾವು ಟ್ರ್ಯಾಕ್​ ನಿರ್ಮಿಸಿದ್ದೇವೆ" ಎಂದು ವಿವರಿಸಿದರು.

ಸ್ಥಳಕ್ಕೆ ಪ್ರಧಾನಿ ಕಾರ್ಯಾಲಯದ ಮಾಜಿ ಸಲಹೆಗಾರ ಭಾಸ್ಕರ್​ ಖುಲ್ಬೆ ಹಾಗೂ ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅಭಿಷೇಕ್​ ರುಹೇಲಾ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ.

ಭಾಸ್ಕರ್​ ಖುಲ್ಬೆ ಮಾತನಾಡಿ, "ಈಗಾಗಲೇ ಸಮತಲ ಪೈಪ್​ಲೈನ್​ ಸುರಂಗದ ಒಳಗಿನಿಂದ 39 ಮೀಟರ್​​ ಮೀಟರ್​ ಪೈಪ್​ಲೈನ್​ ಕೊರೆದಿರುವುದು ಸಂತೋಷದ ವಿಷಯ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ರಕ್ಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತರುವ ಉತ್ಸಾಹದಲ್ಲಿ ಅವರಿದ್ದಾರೆ. ಅದನ್ನು ನಾವು ಸಾಧಿಸುತ್ತೇವೆ ಕೂಡ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಜೊತೆ ಪೈಪ್​ ಮೂಲಕ ಮಾತನಾಡಿದ ಕುಟುಂಬಸ್ಥರು - ವಿಡಿಯೋ

ABOUT THE AUTHOR

...view details