ಚಮೋಲಿ (ಉತ್ತರಾಖಂಡ):ಸುಪ್ರಸಿದ್ಧ ಕೇದಾರನಾಥ ಧಾಮ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಬೆಳಗ್ಗೆ ದೇಗುಲದ ಬಾಗಿಲು ತೆರೆಯುವುದಕ್ಕೂ ಮುಂಚಿತವಾಗಿ ಧಾರ್ಮಿಕ ವಿಧಿ ಮತ್ತು ವೈದಿಕ ಮಂತ್ರಗಳ ಪಠಣ ನಡೆಯಿತು. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದರು.
ಪುರಾಣಪ್ರಸಿದ್ಧ ದೇವಸ್ಥಾನವನ್ನು 15 ಕ್ವಿಂಟಲ್ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥನ ದರ್ಶನ ಭಾಗ್ಯಕ್ಕೆ ಹಾತೊರೆಯುತ್ತಿದ್ದಾರೆ.ದೇವಾಲಯ ಓಪನ್ ಆಗ್ತಿದ್ದಂತೆ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಪೂಜೆ ಸಹ ಸಲ್ಲಿಸಲಾಗಿದೆ.
ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ದರ್ಶನಕ್ಕೆ ನಿಗದಿತ ಕಾಲಮಿತಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಚಾರ್ ಧಾಮ್ಗೆ ತೆರಳುವ ಯಾತ್ರಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ದೇಗುಲದ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
ಇದನ್ನೂ ಓದಿ:ಶುಕ್ರವಾರದ ಭವಿಷ್ಯ: ಇಂದು ಈ ರಾಶಿಯವರಿಗೆ ಶುಭ ಫಲ
ಬದರಿನಾಥಕ್ಕೆ 15,000, ಕೇದಾರನಾಥಕ್ಕೆ 12,000, ಗಂಗೋತ್ರಿಗೆ 7,000 ಮತ್ತು ಯಮುನೋತ್ರಿಗೆ 4,000 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಈ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್ ಪರೀಕ್ಷೆ ಕಡ್ಡಾಯ. ಲಸಿಕೆ ಪಡೆದುಕೊಂಡಿರುವ ಪ್ರಮಾಣ ಪತ್ರ ಒದಗಿಸುವುದು ಕೂಡಾ ಅವಶ್ಯಕವಾಗಿದೆ.