ಪಿಥೋರಗಢ (ಉತ್ತರಾಖಂಡ್):ಉತ್ತರಾಖಂಡ್ನ ಪ್ರಸಿದ್ಧ ಆದಿ ಕೈಲಾಸದ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಾಗ ವಾಹನ ಕಂದಕಕ್ಕೆ ಬಿದ್ದ ಪರಿಣಾಮ ಕರ್ನಾಟಕದ ಮೂಲದ ನಾಲ್ವರು ಸೇರಿ ಆರು ಜನರು ಸಾವನ್ನಪ್ಪಿರುವ ಘಟನೆ ಪಿಥೋರಗಢ ಜಿಲ್ಲೆಯ ಮಂಗಳವಾರ ನಡೆದಿದೆ. ಮೃತ ನಾಲ್ವರನ್ನು ಬೆಂಗಳೂರಿನ ನಿವಾಸಿಗಳು ಹಾಗೂ ಮತ್ತಿಬ್ಬರನ್ನು ಪಿಥೋರಗಢದ ಸ್ಥಳೀಯರು ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಸತ್ಯಬ್ರದಾ ಪರೈದಾ (59), ನೀಲಾಲ ಪನ್ನೋಲ್ (58), ಮನೀಶ್ ಮಿಶ್ರಾ (48), ಪ್ರಜ್ಞಾ (52) ಹಾಗೂ ಪಿಥೋರಗಢದ ಹಿಮಾಂಶು ಕುಮಾರ್ (24), ವೀರೇಂದ್ರ ಕುಮಾರ್ (39) ಎಂಬುವವರೇ ಮೃತರು. ಎಲ್ಲರೂ ಆದಿ ಕೈಲಾಸ ದರ್ಶನ ಮುಗಿಸಿ ಮಂಗಳವಾರ ಸಂಜೆ ಪಿಕಪ್ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧಾರ್ಚುಲಾ ರಸ್ತೆಯ ಮೂಲಕ ಬರುತ್ತಿದ್ದಾಗ ಕಾಳಿ ನದಿಯ ಬಳಿ ಆಳವಾದ ಕಂದಕಕ್ಕೆ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ಕುರಿತು ಮಾಹಿತಿ ಪಡೆದ ತಕ್ಷಣವೇ ಪೊಲೀಸ್ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿತ್ತು. ಜೊತೆಗೆ ಎಸ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಧಾವಿಸಿತ್ತು. ಆದರೆ, ಕಂದಕ ತುಂಬಾ ಆಳವಾಗಿದ್ದರಿಂದ ಹಾಗೂ ಸಂಜೆಯ ಕತ್ತಲು ಕವಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು.
ಇಂದು ಬೆಳಗ್ಗೆ ಮತ್ತೆ ರಕ್ಷಣಾ ಸಿಬ್ಬಂದಿ ಮತ್ತೆ ತಮ್ಮ ಕಾರ್ಯಾಚರಣೆ ಆರಂಭಿಸಿ, ಎಲ್ಲ ಮೃತ ದೇಹಗಳನ್ನು ಕಂದಕದಿಂದ ಹೊರಗೆತೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಧಾರ್ಚುಲಾ ಠಾಣೆ, ಪಾಂಗ್ಲಾ ಠಾಣೆ ಸಿಬ್ಬಂದಿ, ಹೆದ್ದಾರಿ ಗಸ್ತು ಪಡೆಯ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್‌ಡಿಆರ್‌ಎಫ್, ಎಸ್‌ಎಸ್‌ಬಿ, ಐಟಿಬಿಪಿ ಹಾಗೂ ಸೇನೆಯ ಪರ್ವತಾರೋಹಣ ತಂಡದ ಸದಸ್ಯರು ಕೂಡ ಪಾಲ್ಗೊಂಡಿದ್ದರು.
ಈ ಘಟನೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಪಿಥೋರಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ ಸಿಂಗ್, ''ಆರು ಜನರಿದ್ದ ಪಿಕಪ್ ವಾಹನವು ಗುಂಜಿ ಪ್ರದೇಶದಿಂದ ಧಾರ್ಚುಲಾಗೆ ಬರುತ್ತಿತ್ತು. ಈ ವೇಳೆ, ಟ್ಯಾಂಪಾ ದೇವಸ್ಥಾನದ ಸಮೀಪ ಕಂದಕಕ್ಕೆ ಜಾರಿದ ಪರಿಣಾಮ ಚಾಲಕ ಸೇರಿ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ'' ಎಂದು ತಿಳಿಸಿದ್ದರು.
ಮೃತರ ಕುಟುಂಬಗಳಿಗೆ ಸಿಎಂ ಸಂತಾಪ:ಈ ರಸ್ತೆ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ. ''ಧಾರ್ಚುಲಾ - ಲಿಪುಲೇಖ್ ರಸ್ತೆಯ ಲಖನ್‌ಪುರ್ ಬಳಿ ನಡೆದ ದುರದೃಷ್ಟಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಿಎಂ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ: ದುರ್ಗಾ ಪೂಜೆ ಮುಗಿಸಿ ಬರುತ್ತಿದ್ದ ನಾಲ್ವರ ಸಾವು