ನವದೆಹಲಿ : ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಸಿಂಗಾಪುರದಿಂದ ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ. ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಪೆಂಟಗನ್ ಮುಖ್ಯಸ್ಥ ಲಾಯ್ಡ್ ಆಸ್ಟಿನ್ ಅವರನ್ನು ಬರಮಾಡಿಕೊಂಡರು. ಆಸ್ಟಿನ್ ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸದ ಮೂರನೇ ಹಂತದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ.
ತಮ್ಮ ಭಾರತ ಭೇಟಿಯ ಬಗ್ಗೆ ಟ್ವಿಟರ್ನಲ್ಲಿ ಬರೆದಿರುವ ಆಸ್ಟಿನ್, "ನಮ್ಮ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಚರ್ಚೆಗಾಗಿ ಪ್ರಮುಖ ನಾಯಕರನ್ನು ಭೇಟಿ ಮಾಡಲು ನಾನು ಭಾರತಕ್ಕೆ ಆಗಮಿಸಿದ್ದೇನೆ. ಒಟ್ಟಿಗೆ ನಾವು ಮುಕ್ತ ಇಂಡೋ ಪೆಸಿಫಿಕ್‌ಗಾಗಿ ಹಂಚಿಕೆಯ ದೃಷ್ಟಿಯನ್ನು ಮುನ್ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆಸ್ಟಿನ್ ಅವರ ನವದೆಹಲಿ ಭೇಟಿಯು ಭಾರತ-ಅಮೆರಿಕಗಳ ಮಧ್ಯದ ಹೊಸ ರಕ್ಷಣಾ ಆವಿಷ್ಕಾರಗಳು ಮತ್ತು ಕೈಗಾರಿಕಾ ಸಹಕಾರ ಉಪಕ್ರಮಗಳನ್ನು ಮುಂದುವರೆಸುವುದರ ಮೇಲೆ ಪ್ರಮುಖವಾಗಿ ಗಮನ ಕೇಂದ್ರೀಕರಿಸಿದೆ. ಅಮೆರಿಕ ಮತ್ತು ಭಾರತೀಯ ಮಿಲಿಟರಿಗಳ ನಡುವಿನ ಕಾರ್ಯಾಚರಣೆಯ ಸಹಕಾರವನ್ನು ವಿಸ್ತರಿಸಲು ಈ ಭೇಟಿ ಪೂರಕವಾಗಲಿದೆ.
ರಕ್ಷಣಾ ಕಾರ್ಯದರ್ಶಿಯ ಭೇಟಿಯ ಬಗ್ಗೆ ಮಾಹಿತಿ ನೀಡಿರುವ ಪೆಂಟಗನ್, "ಸಿಂಗಾಪುರದ ನಂತರ ಕಾರ್ಯದರ್ಶಿ ಆಸ್ಟಿನ್ ಅವರು ನವದೆಹಲಿಗೆ ಭೇಟಿ ನೀಡಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ನಾಯಕರನ್ನು ಭೇಟಿಯಾಗಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತಗಳು ಯುಎಸ್-ಇಂಡಿಯಾ ರಕ್ಷಣಾ ಪಾಲುದಾರಿಕೆಯನ್ನು ಮುಂದುವರಿಸಲಿವೆ" ಎಂದು ತಿಳಿಸಿದೆ. "ಈ ಭೇಟಿಯು ಹೊಸ ರಕ್ಷಣಾ ನಾವೀನ್ಯತೆ ಮತ್ತು ಕೈಗಾರಿಕಾ ಸಹಕಾರ ಉಪಕ್ರಮಗಳನ್ನು ವೇಗಗೊಳಿಸಲು ಮತ್ತು ಯುಎಸ್ ಮತ್ತು ಭಾರತೀಯ ಮಿಲಿಟರಿಗಳ ನಡುವಿನ ಕಾರ್ಯಾಚರಣೆಯ ಸಹಕಾರವನ್ನು ವಿಸ್ತರಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ" ಎಂದು ಪೆಂಟಗನ್ ಪ್ರಕಟಣೆ ಹೇಳಿದೆ.