ಲಖನೌ (ಉತ್ತರಪ್ರದೇಶ) :ಉತ್ತರ ಪ್ರದೇಶದ 17 ವರ್ಷದ ಬಾಲಕಿಯನ್ನು ಅಪಹರಿಸಿ ಕರ್ನಾಟಕ ಸೇರಿದಂತೆ ವಿವಿಧೆಡೆ ಕರೆದೊಯ್ದು, ಸುಮಾರು ಎರಡು ತಿಂಗಳ ಕಾಲ ಅತ್ಯಾಚಾರ ನಡೆಸಲಾಗಿದೆ. ನಾಪತ್ತೆ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಕೊನೆಗೂ ಬಾಲಕಿಯನ್ನು ಹುಡುಕಿ ರಕ್ಷಿಸಿದ್ದಾರೆ. ಇದೇ ವೇಳೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಉಭಾನ್ ಪ್ರದೇಶದ ನಿವಾಸಿಯಾಗಿದ್ದ ಬಾಲಕಿಯನ್ನು ಆಗಸ್ಟ್ 14 ರ ರಾತ್ರಿ 20 ವರ್ಷದ ಆರೋಪಿ ಅಪಹರಿಸಿದ್ದ. ಬಳಿಕ ಸೆಪ್ಟೆಂಬರ್ 11 ರಂದು ಬಾಲಕಿಯ ತಾಯಿ ಮಗಳ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಪೊಲೀಸರು ಭಾರತೀಯ ದಂಡ ಸಂಹಿತೆ 363 (ಅಪಹರಣ) ಮತ್ತು 366 (ಮಹಿಳೆಯ ಅಪಹರಣಕ್ಕೆ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನಿಂದ ಅಪ್ರಾಪ್ತೆಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಪ್ರಕರಣ ಜಾಡು ಸಿಕ್ಕಿರಲಿಲ್ಲ.
ಕರ್ನಾಟಕದಲ್ಲಿ ಬಾಲಕಿಯ ಒತ್ತೆ:ಪ್ರಮುಖ ಆರೋಪಿ ಸೇರಿದಂತೆ ಇನ್ನು ಕೆಲವರು ಅಪ್ರಾಪ್ತೆಯನ್ನು ಉತ್ತರಪ್ರದೇಶದಿಂದ ಕರ್ನಾಟಕಕ್ಕೆ ಕರೆದುಕೊಂಡು ಬಂದು ಮನೆಯೊಂದರಲ್ಲಿ ಇರಿಸಿದ್ದರು. ಅಲ್ಲಿ ಸುಮಾರು 2 ತಿಂಗಳ ಕಾಲ ಆಕೆಯ ಮೇಲೆ ಪೈಶಾಚಿಕ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ಬಾಲಕಿ ನೀಡಿದ ಹೇಳಿಕೆಯನ್ನು ಬಹಿರಂಗಪಡಿಸಿದ್ದಾರೆ.
ಕರ್ನಾಟಕದಿಂದ ಮರಳಿ ಉತ್ತರಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಬಂದಾಗ ಸುಳಿವು ಪಡೆದ ಪೊಲೀಸರು, ಬಿಲ್ಟ್ರಾ ರೋಡ್‌ವೇಸ್ ಬಳಿ ಆಕೆಯನ್ನು ರಕ್ಷಿಸಿದ್ದಾರೆ. ಲಅ್ಲದೇ, ಆರೋಪಿಯನ್ನೂ ಬಂಧಿಸಿದ್ದಾರೆ. ಬಾಲಕಿ ನೀಡಿದ ಹೇಳಿಕೆ ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಮಲಗಿದ್ದಾಗ ಎತ್ತೊಯ್ದು ಬಾಲಕಿ ಮೇಲೆ ಅತ್ಯಾಚಾರ:ಕೇರಳದ ಎರ್ನಾಕುಲಂ ಜಿಲ್ಲೆಯ ಅಲುವಾ ಎಂಬಲ್ಲಿ ವಲಸೆ ಕುಟುಂಬದ 8 ವರ್ಷದ ಬಾಲಕಿಯನ್ನ ವ್ಯಕ್ತಿಯೊಬ್ಬ ಮನೆಯಲ್ಲಿ ಮಲಗಿದ್ದಾಗಲೇ ಅಪಹರಿಸಿ ಅತ್ಯಾಚಾರ ನಡೆಸಿದ್ದ ಪ್ರಕರಣ ಈಚೆಗೆ ನಡೆದಿತ್ತು.
ಬಾಲಕಿ ತನ್ನ ತಾಯಿಯೊಂದಿಗೆ ಮನೆಯಲ್ಲಿ ಮಲಗಿದ್ದ ವೇಳೆ ಆರೋಪಿ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿದ್ದ. ಮಗು ಅಳುವುದನ್ನು ಕೇಳಿ ವ್ಯಕ್ತಿಯೊಬ್ಬ ತಡೆಯಲು ಬಂದಾಗ ಆತನನ್ನು ಥಳಿಸಿ ಅಲ್ಲಿಂದ ಬಾಲಕಿಯನ್ನು ಕರೆದೊಯ್ದಿದ್ದ. ಬಳಿಕ ಪೊಲೀಸರಿಗೆ ಈ ಬಗ್ಗೆ ಆತ ಮಾಹಿತಿ ನೀಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ತಿರುವನಂತಪುರಂನ ಚೆಂಗಲ್ ನಿವಾಸಿ ಕ್ರಿಸ್ಟಲ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:Rape on minor girl: ಸ್ಕೂಟಿ ಕಲಿಸುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ : ಕಾಮುಕನ ಬಂಧನ