ಹೈದರಾಬಾದ್(ತೆಲಂಗಾಣ):ಇಂದು ಹೈದರಾಬಾದ್ ವಿಮೋಚನಾ ದಿನ. ಈ ದಿನದ ಪ್ರಯುಕ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹೈದರಾಬಾದ್ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು. ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಹೈದರಾಬಾದ್ನಲ್ಲಿ ಈಗಲೂ ನಿಜಾಮ್ ಆಳ್ವಿಕೆ ಇದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂದಿನ 13 ತಿಂಗಳ ಕಾಲ ರಾಜ್ಯದ ಜನತೆ ನಿಜಾಮರ ದಬ್ಬಾಳಿಕೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದ ಅಮಿತ್ ಶಾ, ರಾಜ್ಯದ ಜನರು ಹೈದರಾಬಾದ್ ವಿಮೋಚನಾ ದಿನವನ್ನು ಅಧಿಕೃತವಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ವಿವಿಧ ರಾಜಕೀಯ ಮುಖಂಡರು ವಿಮೋಚನೆ ದಿನಾಚರಣೆ ಆಚರಿಸುವ ಭರವಸೆ ನೀಡಿದ್ದಾರೆ. ಆದರೆ, ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ವೋಟ್ ಬ್ಯಾಂಕ್ನಿಂದಾಗಿ ತಮ್ಮ ಮಾತು ಮರೆತುಬಿಟ್ಟಿದ್ದಾರೆ ಎಂದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ.. ಕೆಸಿಆರ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಇಲ್ಲದಿದ್ದರೆ, ಹೈದರಾಬಾದ್ ವಿಮೋಚನೆಗೊಳ್ಳಲು ಮತ್ತಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತಿತ್ತು. ಎಲ್ಲಿಯವರೆಗೆ ನಿಮಾಜ್ ಪದ್ಧತಿ ಹೊಡೆದು ಹಾಕಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅಖಂಡ ಭಾರತದ ಕನಸು ನನಸಾಗುವುದಿಲ್ಲ ಎಂಬುದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೊತ್ತಿಲ್ಲ ಎಂದರು.
ಹೈದರಾಬಾದ್ನ ಪರೇಡ್ ಮೈದಾನದಲ್ಲಿ ಆಯೋಜನೆಗೊಂಡಿರುವ ತೆಲಂಗಾಣ ವಿಮೋಚನಾ ದಿನಾಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ತೆಲಂಗಾಣದಲ್ಲಿನ ಕೇಸರಿ ಪಕ್ಷ ಬಿಜೆಪಿ ಈ ದಿನವನ್ನು ಹೈದರಾಬಾದ್ ವಿಮೋಚನಾ ದಿನ’ ಎಂದು ಕರೆಯುತ್ತಿದ್ದು, ಆಡಳಿತ ಪಕ್ಷ ಟಿಆರ್‌ಎಸ್ ನೇತೃತ್ವದ ತೆಲಂಗಾಣ ಸರ್ಕಾರ ಇದನ್ನು ‘ರಾಷ್ಟ್ರೀಯ ಏಕೀಕರಣ ದಿನ’ ಎಂದು ಕರೆಯುತ್ತಿದೆ. ವಿಶೇಷವೆಂದರೆ ಇಂದು ರಾಜ್ಯದಲ್ಲಿ ಎರಡು ಪ್ರತ್ಯೇಕ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಒಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮತ್ತೊಂದರಲ್ಲಿ ಮುಖ್ಯಮಂತ್ರಿ ಕೆಸಿಆರ್ ಭಾಗಿಯಾಗಿದ್ದಾರೆ. ಸಿಕಂದರಾಬಾದ್ನಿಂದ ಕೇವಲ 7 ಕಿಲೋ ಮೀಟರ್ ದೂರದ ನಾಂಪಲ್ಲಿಯಲ್ಲಿ ಕೆ. ಚಂದ್ರಶೇಖರ್ ರಾವ್ ರಾಷ್ಟ್ರೀಯ ಏಕೀಕರಣ ದಿನ ಆಚರಣೆ ಮಾಡ್ತಿದ್ದಾರೆ.
ಮುಂದಿನ ಕೆಲ ತಿಂಗಳಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇಂದ್ರ ಬಿಜೆಪಿ ಸರ್ಕಾರ ರಚನೆ ಮಾಡುವ ಕಸರತ್ತು ನಡೆಸುತ್ತಿದೆ. ಇನ್ನು, ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಸಿಆರ್ ವಿವಿಧ ಪಕ್ಷಗಳ ನಾಯಕರನ್ನು ಒಂದುಗೂಡಿಸುವ ಕೆಲಸ ಮಾಡ್ತಿದ್ದಾರೆ.