ನವದೆಹಲಿ:ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಸಮರ್ಥಿಸಿಕೊಂಡ ಕೆಲವೇ ಗಂಟೆಗಳಲ್ಲೇ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ನಿನ್ನೆ(ಮಂಗಳವಾರ) ತಡರಾತ್ರಿ ತುರ್ತು ಸಭೆ ನಡೆಸಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾನೂನನ್ನು ವಿರೋಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವ ಉದ್ದೇಶದಿಂದ ಕಾನೂನು ಆಯೋಗ ಈಗಾಗಲೇ ಸಲಹೆಗಳನ್ನು ಕೋರಿದೆ. ಮಂಗಳವಾರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಯುಸಿಸಿ ಜಾರಿ ಬಗ್ಗೆ ಸುಳಿವು ನೀಡಿದ್ದರು. ಇತ್ತ ಎಐಎಂಪಿಎಲ್‌ಬಿ ರಾತ್ರಿ ಈ ಕುರಿತು ಸಭೆ ನಡೆಸಿದ್ದು ಭಾರಿ ಕುತೂಹಲ ಕೆರಳಿಸಿದೆ.
ಯುಸಿಸಿ ಬಗ್ಗೆ ಮೋದಿ ಹೇಳಿದ್ದೇನು?:ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದೇ ದೇಶದಲ್ಲಿ ಎರಡು ಕಾನೂನುಗಳು ಕಾರ್ಯನಿರ್ವಹಿಸುವುದಿಲ್ಲ. ಸಂವಿಧಾನವು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪುಗಳು ಕೂಡ ಏಕರೂಪದ ಕಾನೂನಿನ ಅಗತ್ಯತೆಯನ್ನು ಸಾರಿವೆ. ಬಿಜೆಪಿ ಮತಬ್ಯಾಂಕ್ಗಾಗಿ ತುಷ್ಟೀಕರಣ ರಾಜಕಾರಣ ಮಾಡುವುದಿಲ್ಲ. ಮತಬ್ಯಾಂಕ್ಗಾಗಿ ವಿಪಕ್ಷಗಳಿಂದ ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದೆ. ಬಿಜೆಪಿ ತುಷ್ಟೀಕರಣದ ಹಾದಿಯನ್ನು ಅನುಸರಿಸುವುದಿಲ್ಲ. ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು.
ದೇಶವೆಂಬುದು ಒಂದು ಕುಟುಂಬ. ಅದರಲ್ಲಿ ಒಬ್ಬರಿಗೆ ಒಂದು ಕಾನೂನು, ಉಳಿವರಿಗೆ ಇನ್ನೊಂದು ಕಾನೂನು ಅನ್ವಯಿಸಲು ಸಾಧ್ಯವಿಲ್ಲ. ವಿಪಕ್ಷಗಳು ಮುಸ್ಲಿಮರನ್ನು ಬೇಕಂತಲೇ ಎತ್ತಿಕಟ್ಟುತ್ತಿವೆ. ಎರಡೆರಡು ಕಾನೂನುಗಳನ್ನು ಇಟ್ಟುಕೊಂಡು ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿ ಖಂಡಿತ ಎಂಬ ಸುಳಿವು ನೀಡಿದ್ದರು.