ಜೈಪುರ(ರಾಜಸ್ಥಾನ): ಇತ್ತೀಚಿನ ದಿನಗಳಲ್ಲಿ ಕೆಲ ಕಾನೂನುಗಳನ್ನು ವಿವರವಾದ ಚರ್ಚೆ ಮತ್ತು ಪರಿಶೀಲನೆಯಿಲ್ಲದೆ ರಚಿಸಲಾಗುತ್ತಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಗೌರವ ಕಡಿಮೆಯಾಗುತ್ತಿದೆ: ನ್ಯಾ.ಎನ್.ವಿ.ರಮಣ
ಈ ಹಿಂದೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಗೌರವವಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಪ್ರತಿಪಕ್ಷಗಳಿಗೆ ಸ್ಥಳಾವಕಾಶದ ಕೊರತೆ ಕಾಣುತ್ತಿದೆ, ಜೊತೆಗೆ ಪರಸ್ಪರ ಗೌರವವೂ ಕಡಿಮೆಯಾಗುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಶಾಸಕಾಂಗ ಕಾರ್ಯಕ್ಷಮತೆಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ರಾಜಕೀಯ ವಿರೋಧವು ಹಗೆತನಕ್ಕೆ ಪರಿವರ್ತಿತವಾಗಬಾರದು. ಇದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡುವಂತಾಗಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಅಭಿಪ್ರಾಯದ ವೈವಿಧ್ಯತೆಯು ರಾಜಕೀಯ ಮತ್ತು ಸಮಾಜವನ್ನು ಶ್ರೀಮಂತಗೊಳಿಸುತ್ತದೆ. ಪ್ರತಿಪಕ್ಷಗಳ ಸಕ್ರಿಯ ವಿರೋಧವು ಆಡಳಿತವನ್ನು ಸುಧಾರಿಸಲು ಮತ್ತು ಸರ್ಕಾರದ ಕಾರ್ಯನಿರ್ವಹಣೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಗೌರವ ಕಡಿಮೆಯಾಗುತ್ತಿದೆ" ಎಂದರು.
ಇದನ್ನೂ ಓದಿ:'ನನ್ನ ಹೆಸರಿನ ನಾಮಫಲಕ ತೆಲುಗಿನಲ್ಲೇ ಇರಬೇಕೆಂದು ಒತ್ತಾಯಿಸಿದ್ದೆ': ಸಿಜೆಐ ಎನ್.ವಿ.ರಮಣ