ಮುಂಬೈ:ದಿನನಿತ್ಯ ಜನರಿಗೆ ಕುಡಿಯುವ ನೀರು ಪೂರೈಕೆ ಮೂಲಭೂತ ಹಕ್ಕಾಗಿದೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರು ನೀರಿಗಾಗಿ ಕೋರ್ಟ್ ಮೆಟ್ಟಿಲೇರುತ್ತಿರುವುದು ದುರಾದೃಷ್ಟಕರ ಎಂದು ಬಾಂಬೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದ ಕಾಂಬೆ ಹಳ್ಳಿ ನಿವಾಸಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್ ಜೆ ಕಥಾವಲ್ಲಾ ಮತ್ತು ಮಿಲಿಂದ್ ಜಾಧವ್ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಹಳ್ಳಿಯ ನಿವಾಸಿಗಳಿಗೆ ದಿನನಿತ್ಯ ಕುಡಿಯುವ ನೀರನ್ನು ಪೂರೈಸಲು ಥಾಣೆ ಜಿಲ್ಲಾ ಪರಿಷತ್ ಮತ್ತು ಭಿವಂಡಿ ನಿಜಂಪುರ ಮಹಾನಗರ ಪಾಲಿಕೆಯ ಸ್ಟೆಮ್ ವಾಟರ್ ಡಿಸ್ಟ್ರಿಬ್ಯೂಷನ್ ಮತ್ತು ಇನ್ಫ್ರಾ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಅರ್ಜಿದಾರರು ತಾವು ಪ್ರಸ್ತುತ ತಿಂಗಳಿಗೆ ಎರಡು ಬಾರಿ ಮಾತ್ರ ನೀರು ಪಡೆಯುತ್ತಿದ್ದೇವೆ. ಅದೂ ಕೂಡ ಸುಮಾರು ಎರಡು ಗಂಟೆಗಳ ಕಾಲ ನೀರು ಸರಬರಾಜು ಮಾಡುತ್ತಾರೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದ್ದಾರೆ.
ಸ್ಟೆಮ್‌ನ ವ್ಯವಸ್ಥಾಪಕ ನಿರ್ದೇಶಕ ಭೌಸಾಹೇಬ್ ದಂಗ್ಡೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಒಂದು ನಿರ್ದಿಷ್ಟ ಅಂಶಕ್ಕೆ ಮಾತ್ರ ಹಾಗೂ ಅರ್ಜಿದಾರರ ಮನೆಗಳಿಗೆ ನೀರು ವಿತರಿಸುವುದು ಹಳ್ಳಿಯ ಗ್ರಾಮ ಪಂಚಾಯತ್ನ ಜವಾಬ್ದಾರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಅಲ್ಲಿನ ಜನಸಂಖ್ಯೆ ಏರಿಕೆಯಿಂದಾಗಿ ಗ್ರಾಮದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ನಮ್ಮ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಆಗ ಮಧ್ಯಪ್ರವೇಶಿಸಿದ ಕೋರ್ಟ್, ವ್ಯವಸ್ಥೆ ಅಪ್‌ಗ್ರೇಡ್ ಆಗೋವರೆಗೆ ಅರ್ಜಿದಾರರು ನೀರಿಗಾಗಿ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಪ್ರತಿದಿನ ಕನಿಷ್ಠ ಕೆಲವು ಗಂಟೆಗಳ ಕಾಲ ನೀರು ಪೂರೈಸಬೇಕು. ಇದು ಅವರ ಮೂಲಭೂತ ಹಕ್ಕು. ನೀರು ಪೂರೈಕೆಗಾಗಿ ಅರ್ಜಿದಾರರು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ನ್ಯಾಯಾಲಯದ ಬಾಗಿಲು ತಟ್ಟಬೇಕಾಗಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಹೈಕೋರ್ಟ್ ಹೇಳಿದೆ.