ಅಮರಾವತಿ(ಮಹಾರಾಷ್ಟ್ರ) : ಅಮರಾವತಿ ಮೂಲದ ಉಮೇಶ್ ಕೋಲ್ಹೆ ಹತ್ಯೆ ಪ್ರಕರಣದ ಎಲ್ಲ ಏಳು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಸೋಮವಾರ ಎಲ್ಲ ಆರೋಪಿಗಳನ್ನು ಎನ್‌ಐಎ ಕಸ್ಟಡಿಗೆ ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಈ ಆರೋಪಿಗಳನ್ನು ಜುಲೈ 8 ಅಥವಾ ಅದಕ್ಕೂ ಮೊದಲು ಎನ್‌ಐಎ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ಅಮರಾವತಿ ಪೊಲೀಸರು ತನಿಖೆಯ ಸಮಯದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ಉಮೇಶ್ ಹತ್ಯೆ ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ನಡುವೆ ಸಂಪರ್ಕವನ್ನು ಕಂಡು ಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅರ್ತಿ ಸಿಂಗ್ ಹೇಳಿದ್ದಾರೆ.
ಮುದ್ದಸರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯೆಬ್ ಖಾನ್ (22), ಅತೀಬ್ ರಶೀದ್ (22) ಮತ್ತು ಯೂಸುಫ್ ಖಾನ್ (32) ಮತ್ತು ಆರೋಪಿತ ಮಾಸ್ಟರ್ ಮೈಂಡ್ ಶೇಖ್ ಇರ್ಫಾನ್ ಶೇಖ್ ರಹೀಮ್ ಈ ಆರೋಪಿಗಳು ಈಗ ಎನ್‌ಐಎ ವಶದಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಶಮೀಮ್ ಅಹ್ಮದ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಜೂನ್ 21 ರಂದು ರಾತ್ರಿ 10 ರಿಂದ 10:30ರ ನಡುವೆ ಉಮೇಶ್ ಮೇಲೆ ಮೂವರ ತಂಡ ಚಾಕುವಿನಿಂದ ಹಲ್ಲೆ ನಡೆಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಟಿವಿ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಕಾಮೆಂಟ್ ಮಾಡಿದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಾಕಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ.
ಇದನ್ನೂ ಓದಿ: ಭಕ್ತರ ಸೋಗಿನಲ್ಲಿ ಬಂದ್ರು, ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಇರಿದ್ರು.. ಚಂದ್ರಶೇಖರ್ ಗುರೂಜಿ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ