ನವದೆಹಲಿ: G20 ಶೃಂಗಸಭೆ ಹಿನ್ನೆಲೆ ತಮ್ಮ ಪತ್ನಿಯೊಂದಿಗೆ ಭಾರತಕ್ಕೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾನುವಾರ ದೆಹಲಿಯಲ್ಲಿರುವ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಎಎನ್ಐ ಸುದ್ಧಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಜಿ20 ಕೊನೆಯದಿನ ಅಂದರೆ ನಾಳೆ ಪತ್ನಿ ಅಕ್ಷತಾ ಮೂರ್ತಿಯವರೊಂದಿಗೆ ಅಕ್ಷರಧಾಮಕ್ಕೆ ಭೇಟಿ ನೀಡುತ್ತಿರುವುದಾಗಿ ಹೇಳಿದ್ದಾರೆ.
ನಿನ್ನೆ ದಿನ ಭಾರತಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದೊಂದಿಗೆ ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ಇದೇ ವೇಳೆ, ನಾನೊಬ್ಬ ಹಿಂದೂ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ನಾನು ಬೆಳದದ್ದೂ ಹೀಗೆಯೆ. ಇಲ್ಲಿರುವ ಎರಡು ದಿನಗಳ ಕಾಲ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುತ್ತೇನೆ. ಕೆಲ ದಿನಗಳ ಹಿಂದೆ ರಕ್ಷಾಬಂಧನವನ್ನು ನಾನು ಆಚರಿಸಿದ್ದೇನೆ. ನನ್ನ ಸಹೋದರಿಯರು ರಾಖಿಯನ್ನು ಕಟ್ಟಿದ್ದಾರೆ. ಕೆಲ ಕಾರಣಾಂತರಗಳಿಂದ ಈ ಬಾರಿಯ ಕೃಷ್ಣಜನ್ಮಾಷ್ಟಮಿ ಆಚರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.
ಮೂಲಗಳ ಪ್ರಕಾರ ನಾಳೆ ಬೆಳಗಿನ ಜಾವ, ರಿಷಿ ಸುನಕ್ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಒಂದು ಗಂಟೆಗಳ ಕಾಲ ದೇವಸ್ಥಾನದಲ್ಲಿ ಕಳೆಯಲಿದ್ದಾರೆ ಎನ್ನಲಾಗುತ್ತಿದೆ. ಸುನಕ್ ಅವರ ಭೇಟಿ ಖಚಿತವಾಗಿದ್ದು, ಈಗಾಗಲೇ ದೇವಸ್ಥಾನದ ಸುತ್ತಲು ಬಿಗಿ ಭದ್ರತೆ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು, ವಾಹನಗಳ ತಪಾಸಣೆ ಕೂಡ ನಡೆಸಲಾಗುತ್ತಿದೆ.