ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ಸೇರಿ ಆರು ರಾಜ್ಯಗಳಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಇದರಲ್ಲಿ ಅಂಧೇರಿ ಪೂರ್ವ ವಿಧಾನಸಭಾ ಮತ ಕ್ಷೇತ್ರದ ಮತದಾರರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದ ಈ ಕ್ಷೇತ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ 66 ಸಾವಿರಕ್ಕೂ ಅಧಿಕ ಮತಗಳಿಂದ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ನೋಟಾ (ಈ ಮೇಲಿನ ಯಾರೂ ಅಲ್ಲ) ಮತಗಳೇ ಎರಡನೇ ಸ್ಥಾನದಲ್ಲಿವೆ.
ನವೆಂಬರ್ 3ರಂದು ನಡೆದ ಅಂಧೇರಿ ಪೂರ್ವ ಉಪ ಚುನಾವಣೆಯ ಮತದಾನದಲ್ಲಿ ಒಟ್ಟಾರೆ 86,570 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ರುತುಜಾ ಲಟ್ಕೆ 66,530 (ಶೇ.76.30) ಮತಗಳನ್ನು ಪಡೆದಿದ್ದಾರೆ. ಇವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಅಭ್ಯರ್ಥಿ ಕೂಡ ಕಠಿಣ 2 ಸಾವಿರ ಮತಗಳನ್ನೂ ಪಡೆಯಲು ಸಾಧ್ಯವಾಗಿಲ್ಲ. ಸ್ವತಂತ್ರ ಅಭ್ಯರ್ಥಿಗಳಾದ ರಾಜೇಶ್ ತ್ರಿಪಾಠಿ 1,571 ಮತ್ತು ನೀನಾ ಖೇದೇಕರ್ 1,531 ಹಾಗೂ ಆಪ್ಕಿ ಆಪ್ನಿ ಪಕ್ಷದ ಬಿ.ವಿ.ವಿನಾಯಕ ನಡಾರ್ 1,515 ಮಾತ್ರ ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.
ನೋಟಾ ಮತಗಳಿಗೆ 2ನೇ ಸ್ಥಾನ: ಅಂಧೇರಿ ಪೂರ್ವ ಕ್ಷೇತ್ರದ ಜನತೆ ನೋಟಾಗೆ ಹೆಚ್ಚಿನ ಮಹತ್ವ ಕೊಟ್ಟಂತಿದೆ. ಯಾಕೆಂದರೆ, ಶೇ.14ರಷ್ಟು ಮತಗಳೆಂದರೆ ಒಟ್ಟಾರೆ 12,806 ಮತಗಳನ್ನು ನೋಟಾ ಒತ್ತಲಾಗಿದೆ. ವಿಜೇತ ಅಭ್ಯರ್ಥಿ ರುತುಜಾ ಲಟ್ಕೆ ಅವರಿಗೆ ಚಲಾವಣೆಯಾದ ಮತಗಳ ನಂತರ ನೋಟಾ ಮತಗಳ ಸಂಖ್ಯೆಯೇ ಅಧಿಕವಾಗಿದೆ.