ಕಂಕೇರ್ (ಛತ್ತೀಸ್‌ಗಢ):ಛತ್ತೀಸ್ಗಢದಲ್ಲಿ ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಒಂದು ದಿನ ಮೊದಲು ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದಾರೆ. ಕಂಕೇರ್ ಜಿಲ್ಲೆಯಲ್ಲಿ ಸೋಮವಾರ ಐಇಡಿ ಸ್ಫೋಟವಾಗಿ ಇಬ್ಬರು ಚುನಾವಣಾ ಸಿಬ್ಬಂದಿ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರು ಗಾಯಗೊಂಡಿದ್ದಾರೆ.
ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ಮತಗಟ್ಟೆಗಳಿಗೆ ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಚುನಾವಣಾಧಿಕಾರಿಗಳು ತೆರಳುತ್ತಿದ್ದಾಗ ಮಧ್ಯಾಹ್ನ 3.30 ರ ಸುಮಾರಿಗೆ ಮಾವೋವಾದಿಗಳು ಐಇಡಿ ಸ್ಫೋಟ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮಧ್ಯಾಹ್ನ ಬಿಎಸ್‌ಎಫ್ ಸಿಬ್ಬಂದಿ ಸಮೇತ ಚುನಾವಣಾಧಿಕಾರಿಗಳ ತಂಡವು ಮತಗಟ್ಟೆಗಳಿಗೆ ತೆರಳುತ್ತಿದ್ದರು. ಈ ವೇಳೆ ಮಾವೋವಾದಿಗಳು ಮೂರು ಐಇಡಿಗಳನ್ನು ರೆಂಗಾವಾಹಿ ಎಂಬಲ್ಲಿ ಸ್ಫೋಟಿಸಿದರು. ಮತಗಟ್ಟೆಯಿಂದ 1500 ಮೀ. ದೂರದಲ್ಲಿರುವ ರೋಡ್‌ಪಾರಾ ಮತ್ತು ರೆಂಗಾವಾಹಿ ನಡುವೆ ಈ ಸ್ಫೋಟವಾಗಿದೆ. ಘಟನೆಯಲ್ಲಿ ಬಿಎಸ್‌ಎಫ್ ಯೋಧನೊಬ್ಬನ ಎರಡೂ ಕಾಲುಗಳಿಗೆ ಗಾಯಗಳಾಗಿವೆ. ಇಬ್ಬರು ಮತಗಟ್ಟೆ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.