ಶ್ರೀನಗರ(ಜಮ್ಮು ಕಾಶ್ಮೀರ) :ಕಣಿವೆ ನಾಡಿನ ಪೂಂಚ್ ಸೆಕ್ಟರ್ ಬಳಿಯ ದುಗ್ರಾನ್ ಪೋಶಾನ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಸೇನಾಪಡೆ ಕೊಂದಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ಚಟ್ಟಪಾನಿ- ದುಗ್ರಾನ್ ಗ್ರಾಮದಲ್ಲಿ ನಡೆದಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿಕೆ ನೀಡಿದ್ದಾರೆ.
ಓದಿ:ಉಗ್ರರ ಶೋಧ ಕಾರ್ಯಾಚರಣೆ ವೇಳೆ ಎತ್ತರದ ಪ್ರದೇಶದಿಂದ ಉರುಳಿ ಯೋಧ ಹುತಾತ್ಮ
ಮೃತಪಟ್ಟ ಭಯೋತ್ಪಾದಕರು ಸಾಜಿದ್ ಮತ್ತು ಬಿಲಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೂಡಾ ಜೈಷ್ ಇ ಮೊಹಮದ್ ಸಂಘಟನೆಗೆ ಸೇರಿದವರಾಗಿದ್ದಾರೆ. ಬಂಧಿತನನ್ನು ವಿಚಾರಣೆ ನಡೆಸಲಾಗುತ್ತಿದೆ.
ಸದ್ಯಕ್ಕೆ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಡಿಡಿಸಿ ಚುನಾವಣೆಯಲ್ಲಿ ಹೆಚ್ಚಿನ ಜನರು ಭಾಗವಹಿಸುತ್ತಿರುವ ಕಾರಣದಿಂದ ಸಮಸ್ಯೆ ಸೃಷ್ಟಿಸುವ ಸಲುವಾಗಿ ಪಾಕ್ನಿಂದ ಒಳನುಸುಳಲ್ಪಟ್ಟ ಭಯೋತ್ಪಾದಕರು ಇವರಾಗಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಕಾರ್ಯಾಚರಣೆ ವೇಳೆ ಎರಡು ಎಕೆ-47 ರೈಫಲ್ಗಳು, ಒಂದು ಯುಬಿಜಿಎಲ್ ಹಾಗೂ ಸ್ಯಾಟ್ಫೋನ್ ಅನ್ನು ಜಪ್ತಿ ಮಾಡಲಾಗಿದೆ.