ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಭಾರತ ಮೂಲದ ಇನ್ನೂ ಎರಡು ಚೀತಾ ಮರಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮಹತ್ವಾಕಾಂಕ್ಷೆಯ ಚೀತಾ ಪುನರುಜ್ಜೀವನ ಯೋಜನೆಗೆ ಹಿನ್ನಡೆಯಾಗಿದೆ.
ಈ 2 ಮರಿಗಳ ಸಾವಿನೊಂದಿಗೆ ಒಟ್ಟು ಕೆಎನ್‌ಪಿಯಲ್ಲಿ ಮೃತಪಟ್ಟ ಚೀತಾ ಮರಿಗಳ ಸಂಖ್ಯೆ ಮೂರಕ್ಕೆ ಏರಿದೆ. ನಮೀಬಿಯಾದಿಂದ ಭಾರತದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ಕರೆತರಲಾಗಿತ್ತು. ಕರೆತಂದಿದ್ದ ಚೀತಾಗಳ ಪೈಕಿ "ಜ್ವಾಲ" ಎನ್ನುವ ಚೀತಾದ ಎರಡು ಮರಿಗಳು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಗುರುವಾರ ತಿಳಿಸಿದೆ. ಕೆಲ ದಿನಗಳ ಹಿಂದೆ ಜ್ವಾಲಾ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಒಂದು ಮರಿ ಮಂಗಳವಾರ ಮೃತಪಟ್ಟಿತ್ತು. ಈಗ ಇನ್ನೆರಡು ಮರಿಗಳು ಸಾವನ್ನಪ್ಪಿದ್ದು ಒಟ್ಟು 4 ಮರಿಗಳ ಪೈಕಿ 3 ಮರಿಗಳು ಸಾವನ್ನಪ್ಪಿವೆ.
ಮರಿಗಳ ಸಾವಿಗೆ ಕಾರಣ:ತಾಪಮಾನವು 46-47 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಮರಿಗಳು ತೀವ್ರ ನಿರ್ಜಲೀಕರಣಗೊಂಡಿವೆ. ಇದರಿಂದ ಮರಿಗಳ ಸಾವಾಗುತ್ತಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಮಂಗಳವಾರ ಒಂದು ಮರಿ ಸಾವನ್ನಪ್ಪಿದ ಬಳಿಕ ಉಳಿದ ಮೂರು ಮರಿಗಳ ಮೇಲೆ ತೀವ್ರಾ ನಿಗಾ ಇಡಲಾಗಿತ್ತು. ಮಧ್ಯಾಹ್ನ ಜ್ವಾಲಾ ಚೀತಾಗೆ ಪೂರಕ ಆಹಾರ ನೀಡಲಾಯಿತು.
ಇದನ್ನೂ ಓದಿ:ಎರಡು ತಿಂಗಳೊಳಗೆ 3 ಚೀತಾ ಸಾವು: ಸುಪ್ರೀಂ ಕೋರ್ಟ್ ಕಳವಳ, ರಾಜಸ್ಥಾನಕ್ಕೆ ಸ್ಥಳಾಂತರಿಸಲು ಸಲಹೆ