ಸೋನಿಪತ್(ಹರಿಯಾಣ):ಕಳೆದ ಕೆಲ ದಿನಗಳಿಂದ ದೇಶದಲ್ಲಿ ಅಪ್ರಾಪ್ತೆಯರ ಮೇಲಿನ ದುಷ್ಕೃತ್ಯಗಳು ಹೆಚ್ಚಾಗುತ್ತಿದ್ದು, ಗೋವಾ, ನವದೆಹಲಿ ಘಟನೆ ಬೆನ್ನಲ್ಲೇ ಇದೀಗ ಹರಿಯಾಣದಲ್ಲೂ ಇಂತಹದೊಂದು ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಹರಿಯಾಣದ ಸೋನಿಪತ್ನಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿರುವ ಕಾಮುಕರು, ಬಳಿಕ ಕೊಲೆ ಮಾಡಿರುವ ಘಟನೆ ನಡೆದಿದೆ. ಕುಂಡಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಎಸಗಿರುವ ಕಾಮುಕರು ಅವರಿಗೆ ಬಲವಂತವಾಗಿ ಕೀಟನಾಶಕ ಕುಡಿಸಿ ಪರಾರಿಯಾಗಿದ್ದಾರೆ. ಘಟನೆಯಿಂದ ಇಬ್ಬರು ಸಹೋದರಿಯರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನೀಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಇವರ ಮೇಲೆ ದುಷ್ಕೃತ್ಯ ನಡೆದಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಗೊತ್ತಿಲ್ಲದ ಕಾರಣ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಆದರೆ ಅನುಮಾನ ಬಂದಿರುವ ಕಾರಣ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ, ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಕೀಟನಾಶಕ ಕುಡಿಸಿದ್ದು ದೃಢಪಟ್ಟಿದೆ. ಕೆಲವರ ವಿಚಾರಣೆ ನಡೆಸಿದಾಗ ನಾಲ್ವರು ಆರೋಪಿಗಳ ಹೆಸರು ಕೇಳಿ ಬಂದಿದೆ. ಇದೀಗ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಆರಂಭಿಸಲಾಗಿದೆ.
ಇದನ್ನೂ ಓದಿರಿ: ಒಬಿಸಿಗೆ ಮೀಸಲು ಹೆಚ್ಚಳ ವಿಧೇಯಕಕ್ಕೆ ಅಂಗೀಕಾರ ನೀಡಿದ ಲೋಕಸಭೆ: ರಾಜ್ಯಗಳಿಗೆ ಬಂತು ಆನೆ ಬಲ
ಕುಂಡಲಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊರಗಡೆ ಕಾಲೋನಿ ಇದ್ದು, ಹೊಲದಲ್ಲಿ ಕೆಲಸ ಮಾಡುವ ಕೆಲವರು ಇಲ್ಲಿ ವಾಸ ಮಾಡುತ್ತಾರೆ. ಬಿಹಾರದ ಕುಟುಂಬ ಸಹ ಇಲ್ಲಿ ವಾಸವಾಗಿದೆ. ಈ ಕುಟುಂಬದಲ್ಲಿ 14 ಹಾಗೂ 16 ವಯಸ್ಸಿನ ಇಬ್ಬರು ಹುಡುಗಿಯರು ಇದ್ದಾರೆ. ಆಗಸ್ಟ್ 5ರ ರಾತ್ರಿ ಈ ಕೃತ್ಯ ನಡೆದಿದ್ದು, ಇಬ್ಬರ ಆರೋಗ್ಯ ಸ್ಥಿತಿ ಹದಗೆಟ್ಟಾಗ ದೆಹಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಪಿಗಳ ಬಂಧನಕ್ಕಾಗಿ ನಾಲ್ಕು ತಂಡ ರಚನೆ ಮಾಡಿದ್ದು, ಶೋಧಕಾರ್ಯ ಆರಂಭಗೊಂಡಿದೆ.