ಶ್ರೀನಗರ:ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಇಂದು ಮತ್ತೊಂದು ಎನ್‌ಕೌಂಟರ್ ನಡೆದಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನಾಪಡೆಗಳು ಹೊಡೆದುರುಳಿಸಿವೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವನಿಗಮ್ ಪಯೀನ್ ಕ್ರೀರಿ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಗುರುವಾರ ಬೆಳಗ್ಗೆಯೇ ಶೋಧ ಕಾರ್ಯಾಚರಣೆಗಿಳಿದವು. ಈ ವೇಳೆ ಸೇನಾ ಪಡೆಗಳ ಮೇಲೆಯೇ ಉಗ್ರರು ಗುಂಡಿನ ದಾಳಿ ನಡೆಸಿದರು.
ಪ್ರತಿದಾಳಿ ನಡೆಸಿದ ಸೇನೆ ಇಬ್ಬರು ಆಗಂತುಕರನ್ನು ಎನ್‌ಕೌಂಟರ್ ಮಾಡಿದೆ. ಸ್ಥಳದಲ್ಲಿ ಮೃತದೇಹಗಳನ್ನು ವಶಕ್ಕೆ ಪಡೆದು ಅವರು ಯಾವ ಸಂಘಟನೆಗೆ ಸೇರಿದವರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಎಕೆ 47 ರೈಫಲ್ ಮತ್ತು ಪಿಸ್ತೂಲ್ ಸೇರಿದಂತೆ ಸ್ಫೋಟಕ ಸಾಮಗ್ರಿ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕಣಿವೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಇದು ಎರಡನೇ ಎನ್‌ಕೌಂಟರ್ ಆಗಿದೆ. ಬುಧವಾರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭದ್ರತಾ ಪಡೆಗಳ ಕಣ್ತಪ್ಪಿಸಿ ಒಳನುಸುಳುವಿಕೆಗೆ ಪ್ರಯತ್ನಿಸುತ್ತಿದ್ದ ಇಬ್ಬರನ್ನು ಎನ್‌ಕೌಂಟರ್ ಮಾಡಲಾಗಿತ್ತು.
ಮಾರ್ಚ್‌ನಲ್ಲಿ ಪುಲ್ವಾಮಾದ ಮಿಟ್ರಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿತ್ತು. ಇದಾದ ತಿಂಗಳ ಬಳಿಕ ಕುಪ್ವಾರದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದರು. ಈ ಹಿಂದೆ ಫೆಬ್ರವರಿಯಲ್ಲಿ ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ತುಸು ಶಾಂತವಾಗಿದ್ದ ಕಣಿವೆಯಲ್ಲಿ ಮತ್ತೆ ಗುಂಡಿನ ಮೊರೆತ ಶುರುವಾಗಿದೆ.
ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ:ಕಣಿವೆಯಲ್ಲಿ ಕಳೆದ ತಿಂಗಳು ಸೇನಾ ವಾಹನದ ಮೇಲೆ ಉಗ್ರರು ಗ್ರೆನೇಡ್ ದಾಳಿ ಮಾಡಿ ರಕ್ತಪಾತ ಸೃಷ್ಟಿಸಿದ್ದರು. ಪೂಂಚ್ ಜಿಲ್ಲೆಯ ಭಟ ಧುರಿಯನ್ ಪ್ರದೇಶದ ಹೆದ್ದಾರಿಯಲ್ಲಿ ದಾಳಿ ನಡೆದಿತ್ತು. ಏಪ್ರಿಲ್ 20ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಿಂಬರ್ ಗಲಿಯಿಂದ ಸಾಂಗಿಯೋಟ್‌ಗೆ ಸೇನಾ ವಾಹನ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಏಕಾಏಕಿ ವಾಹನದ ಮೇಲೆ ಉಗ್ರರು ಎಸೆದ ಗ್ರೆನೇಡ್ನಿಂದ ಬೆಂಕಿ ಹೊತ್ತಿಕೊಂಡಿತ್ತು. ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದರು.
ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಲಭ್ಯವಾಗಿತ್ತು. ಇದರಲ್ಲಿ ಯೋಧರ ಮೃತದೇಹಗಳು ವಾಹನದ ಪಕ್ಕದಲ್ಲಿಯೇ ಬಿದ್ದಿರುವುದು ಮತ್ತು ಸೇನಾ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿತ್ತು. ಸೇನಾ ವಾಹನದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮಗುರು ಮತ್ತು ಓರ್ವ ಸರ್ಕಾರಿ ನೌಕರ ಮತ್ತು ಇತರೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಉಗ್ರಗಾಮಿಗಳೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆ ಮರ್ಕಝ್ ಉಲ್ ಮಾರಿಫ್ ಎಂಬ ಮದರಸಾದ ಮೌಲ್ವಿ ಮಂಜೂರ್ ಎಂಬವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಕುಪ್ವಾರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಎನ್‌ಕೌಂಟರ್ ಮಾಡಿದ ಸೇನೆ