ಚಂಡೀಗಢ (ಪಂಜಾಬ್): ಪಂಜಾಬ್ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಪತ್ತೆ ಹೆಚ್ಚಿದ್ದಾರೆ. ಈ ಜಾಲದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ 10 ಕೆಜಿ ಹೆರಾಯಿನ್ ಮತ್ತು ಹೈಟೆಕ್ ಡ್ರೋನ್‌ಅನ್ನು ಜಪ್ತಿ ಮಾಡಿದ್ದಾರೆ.
ಪಂಜಾಬ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯುದ್ದಕ್ಕೂ ಇತ್ತೀಚೆಗೆ ಮಾದಕವಸ್ತು ಕಳ್ಳಸಾಗಣೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಎಚ್ಚೆತ್ತುಕೊಂಡಿದೆ. ಅಲ್ಲದೇ, ಮುಖ್ಯಮಂತ್ರಿ ಭಗವಂತ್ ಮಾನ್ ನಿರ್ದೇಶನದ ಮೇರೆಗೆ ಡ್ರಗ್ಸ್ ದಂಧೆ ವಿರುದ್ಧದ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಒಳನುಸುಳಲು ಯತ್ನಿಸುತ್ತಿದ್ದ ಪಾಕ್ ಕಳ್ಳಸಾಗಾಣಿಕೆದಾರರ ಮೇಲೆ ಫೈರಿಂಗ್: 25 ಕೆಜಿ ಹೆರಾಯಿನ್ ಜಪ್ತಿ
ಇದರ ಭಾಗವಾಗಿ ನಡೆದ ಕಾರ್ಯಾಚರಣೆಯಲ್ಲಿ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ ಪಂಜಾಬ್ ಪೊಲೀಸರು ದೊಡ್ಡ ಶಾಕ್ ನೀಡಿದ್ದು, ಈ ಗ್ಯಾಂಗ್ನ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲೂ ಯಶಸ್ವಿಯಾಗಿದ್ದಾರೆ. ಬಂಧಿತ ಕಳ್ಳಸಾಗಾಣಿಕೆದಾರರನ್ನು ದಲ್ಬೀರ್ ಮತ್ತು ಜಗದೀಶ್ ಎಂದು ಗುರುತಿಸಲಾಗಿದೆ. ಇವರು ಈ ಡ್ರಗ್ಸ್ ದಂಧೆಯ ಕಿಂಗ್ ಪಿನ್ಗಳು ಆಗಿದ್ದಾರೆ ಎಂದು ತಿಳಿದು ಬಂದಿದೆ.
ಪಂಜಾಬ್ನಲ್ಲಿ ಡ್ರಗ್ಸ್ ದಂಧೆಯ ಇಬ್ಬರು ಕಿಂಗ್ ಪಿನ್ಗಳನ್ನು ಪೊಲೀಸರು ಬಂಧಿಸಿದ್ದಾರೆ 3 ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಖದೀಮರು:ಈ ಬಗ್ಗೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ರವಿವಾರ ಮಾಧ್ಯಮಗಳಿಗೆ ವಿವರಣೆ ನೀಡಿದ್ದು, ಮಾದಕವಸ್ತು ಕಳ್ಳಸಾಗಣೆ ಜಾಲದ ದೊಡ್ಡ ಗ್ಯಾಂಗ್ ಬಯಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತ ಇಬ್ಬರೂ ಆರೋಪಿಗಳು ಅಮೃತಸರ ಮತ್ತು ಘರಿಂಡಾ ನಿವಾಸಿಗಳಾಗಿದ್ದಾರೆ. ಅವರು ಕಳೆದ ಮೂರು ವರ್ಷಗಳಿಂದಲೂ ಮಾದಕವಸ್ತು ಕಳ್ಳಸಾಗಣೆಯಲ್ಲಿ ಈ ಆರೋಪಿಗಳು ತೊಡಗಿದ್ದರು ಎಂದು ಮಾಹಿತಿ ನೀಡಿದರು.
ಆದರೆ, ಕಳ್ಳಸಾಗಾಣಿಕೆದಾರರಾದ ದಲ್ಬೀರ್ ಮತ್ತು ಜಗದೀಶ್ ವಿರುದ್ಧ ಇದುವರೆಗೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರಲಿಲ್ಲ. ಗುಪ್ತಚರ ಮಾಹಿತಿ ಮೇರೆಗೆ ಅಮೃತಸರ ಗ್ರಾಮಾಂತರ ಪೊಲೀಸರು ಎಸ್‌ಎಸ್‌ಪಿ ಸ್ವಪನ್ ಶರ್ಮಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸ್ಮಗ್ಲರ್‌ಗಳ ಈ ಗ್ಯಾಂಗ್ಅನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ವಿವರಿಸಿದರು.
ಡ್ರೋನ್ ಬಳಸಿ ಡ್ರಗ್ಸ್ ಸಂಗ್ರಹ: ಅಲ್ಲದೇ, ಕಳ್ಳಸಾಗಾಣಿಕೆದಾರರ ಬಗ್ಗೆ ಮತ್ತೊಂದು ಬೆಚ್ಚಿಬೀಳಿಸುವ ಅಂಶ ಕೂಡ ಬಯಲಾಗಿದೆ. ಡ್ರೋನ್‌ಗಳನ್ನು ಬಳಸಿ ಗಡಿಯಾಚೆಯಿಂದ ನಿಷಿದ್ಧ ಡ್ರಗ್ಸ್ ಸಂಗ್ರಹಿಸುತ್ತಿದ್ದರು. ನಂತರ ಈ ಡ್ರಗ್ಸ್ಅನ್ನು ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರ ಬಿದ್ದಿದೆ ಎಂದು ಡಿಜಿಪಿ ಗೌರವ್ ಯಾದವ್ ಹೇಳಿದರು.
ಅಮೆರಿಕನ್ ಡ್ರೋನ್ ಪತ್ತೆ: ಈ ಕಾರ್ಯಾಚರಣೆಯಲ್ಲಿ ಇಬ್ಬರೂ ಕಳ್ಳಸಾಗಣೆದಾರರಿಂದ ಹೈಟೆಕ್ ಡ್ರೋನ್ ಜಪ್ತಿ ಮಾಡಲಾಗಿದೆ. ಇದು ಇತ್ತೀಚಿನ ಅಮೆರಿಕನ್ ಡ್ರೋನ್ ಆಗಿದ್ದು, ಡಿಜೆಐ ಸರಣಿಯ ಡ್ರೋನ್ ಆಗಿದೆ. ಅಲ್ಲದೇ, ಇದು 20 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಮತ್ತು ಇನ್‌ಫ್ರಾರೆಡ್ ಆಧಾರಿತ ರಾತ್ರಿ ದೃಷ್ಟಿ ಕ್ಯಾಮರಾದಂತಹ ಹೈಟೆಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಕಳೆದ ಒಂದು ತಿಂಗಳೊಳಗೆ ಮಾದಕವಸ್ತು ಕಳ್ಳಸಾಗಣೆಯ ಕಾರ್ಯಾಚರಣೆಯಲ್ಲಿ ಪೊಲೀಸರು ವಶಕ್ಕೆ ಪಡೆದ ಐದನೇ ಡ್ರೋನ್ ಇದಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದರು.
ಹರಿಯಾಣ ಮತ್ತು ದೆಹಲಿಯಲ್ಲೂ ಪೊಲೀಸ್ ದಾಳಿ: ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಎಸ್‌ಎಸ್‌ಪಿ ಸ್ವಪನ್ ಶರ್ಮಾ, ಮಾದಕವಸ್ತು ಕಳ್ಳಸಾಗಣೆಗೆ ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಇಬ್ಬರೂ ಕಳ್ಳಸಾಗಣೆದಾರರು ಇಷ್ಟು ದಿನ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಅಲ್ಲದೇ, ಇವರು ನೆರೆಯ ರಾಜ್ಯಗಳಲ್ಲಿ ಸುಸ್ಥಾಪಿತ ಪೂರೈಕೆ ಜಾಲವನ್ನು ಹೊಂದಿರುವುದನ್ನೂ ಪತ್ತೆ ಹೆಚ್ಚಲಾಗಿದೆ. ಈ ನಿಟ್ಟಿನಲ್ಲಿ ಹರಿಯಾಣ ಮತ್ತು ದೆಹಲಿಯ 12 ಸ್ಥಳಗಳಲ್ಲಿ ಪೊಲೀಸ್ ತಂಡಗಳು ದಾಳಿ ನಡೆಸುತ್ತಿದ್ದು, ಇದರಿಂದ ಇನ್ನೂ ಹೆಚ್ಚಿನ ಡ್ರಗ್ಸ್ ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಐದು ತಿಂಗಳಲ್ಲಿ 39 ಕೆಜಿ ಹೆರಾಯಿನ್ ವಶ: ಅಮೃತಸರ ಗ್ರಾಮಾಂತರ ಪೊಲೀಸರು ಈ ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ಸತತವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಪರಿಣಾಮ ಕಳೆದ ಐದು ತಿಂಗಳಲ್ಲಿ ಇದುವರೆಗೆ 39 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರತಾ ರೇಖೆಯಲ್ಲಿ ಬಿಗಿಯಾದ ಕ್ರಮ ಮತ್ತು ಬಿಎಸ್ಎಫ್ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದಿಂದ ಮಾದಕವಸ್ತುವಿಗೆ ಕಡಿವಾಣ ಹಾಕುವಲ್ಲಿ ಸಾಧ್ಯವಾಗುತ್ತಿದೆ.
ಇದನ್ನೂ ಓದಿ:ಡ್ರಗ್ಸ್ ದಂಧೆಯ ಕರಾಳ ಮುಖ.. ಹೆಚ್ಚುತ್ತಿದೆ ಮಹಿಳಾ ಡ್ರಗ್ಸ್ ಪೆಡ್ಲರ್ಗಳ ಸಂಖ್ಯೆ!