ಭುವನೇಶ್ವರ:ಜಾಜ್‌ಪುರದ ಕೊರೈ ನಿಲ್ದಾಣದ ಪ್ರಯಾಣಿಕರಿದ್ದ ಕೊಠಡಿಗೆ ಹಳಿ ತಪ್ಪಿದ ಗೂಡ್ಸ್ ರೈಲಿನ ಬೋಗಿಗಳು ಡಿಕ್ಕಿ ಹೊಡೆದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರ್ಘಟನೆ ಇಂದು ಬೆಳಗ್ಗೆ 6.45ರ ಸುಮಾರಿಗೆ ಸಂಭವಿಸಿದೆ.
ಅಧಿಕೃತ ಮೂಲಗಳ ಪ್ರಕಾರ, ಪೂರ್ವ ವಿಭಾಗದ ರೈಲ್ವೆ ವ್ಯಾಪ್ತಿಯ ಕೊರೈ ನಿಲ್ದಾಣದಲ್ಲಿ ಇಂದು ಮುಂಜಾವು ಪ್ರಯಾಣಿಕರು ತಮ್ಮ ಸ್ಥಳಗಳಿಗೆ ತೆರಳಲು ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು ಬೋಗಿಗಳು ಏಕಾಏಕಿ ವಿಶ್ರಾಂತಿ ಕೊಠಡಿಗೆ ನುಗ್ಗಿದೆ. ಅಪಘಾತದಿಂದಾಗಿ ನಿಲ್ದಾಣದ ಕಟ್ಟಡಕ್ಕೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಜಖಂಗೊಂಡ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಗುರುತುಗಳು ಇನ್ನಷ್ಟೇ ಪತ್ತೆಯಾಗಬೇಕಿದೆ.