ಬ್ಯಾಟರಿ ಸಮಸ್ಯೆ: ಎರಡು ಸ್ಲೀಪರ್ ಬಸ್‌ಗಳು ಬೆಂಕಿಯಿಂದ ಸುಟ್ಟು ಕರಕಲು ಹೈದರಾಬಾದ್ (ತೆಲಂಗಾಣ): ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್ಆರ್ಟಿಸಿ)ಯ ಎರಡು ಸ್ಲೀಪರ್ ಲಕ್ಸುರಿ ಬಸ್ಗಳಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಬಸ್ಗಳಲ್ಲಿ ಯಾವುದೇ ಪ್ರಯಾಣಿಕರು ಇದರ ಕಾರಣದಿಂದ ಭಾರಿ ದುರಂತ ತಪ್ಪಿದಂತಾಗಿದೆ.
ಹೈದರಾಬಾದ್ - ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಿವ್ವೆನ್ಲಾ ಮಂಡಲದ ಗುಂಪೂಲ ಗ್ರಾಮದ ಹೊರವಲಯದ ಈ ಘಟನೆ ಜರುಗಿದೆ. ಮೊದಲು ಒಂದು ಬಸ್ನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಬಸ್‌ಗೂ ಅಗ್ನಿ ಆವರಿಸಿದೆ. ಪರಿಣಾಮ ಎರಡೂ ಬಸ್‌ಗಳು ದೊಡ್ಡ ಪ್ರಮಾಣದ ಬೆಂಕಿಯಿಂದ ಹೊತ್ತಿ ಉರಿದಿವೆ. ಇದರಿಂದ ದಟ್ಟ ಹೊಗೆ ಕೂಡ ಆವರಿಸಿಕೊಂಡಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡಿದ್ದು ಹೇಗೆ?: ಹೈದರಾಬಾದ್‌ನಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಎಪಿಎಸ್‌ಆರ್‌ಟಿಸಿಯ 'ವೆನ್ನೆಲ' ಸ್ಲೀಪರ್ ಬಸ್ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಯಾಟರಿ ಸಮಸ್ಯೆಯಿಂದ ಗುಂಪೂಲ ಗ್ರಾಮದ ಬಳಿ ಕೆಟ್ಟು ನಿಂತಿದೆ. ಆಗ ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರಿಗೆ ಮತ್ತೊಂದು ಬಸ್ ವ್ಯವಸ್ಥೆ ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ. ನಂತರ ಸೂರ್ಯಪೇಟ್ ಡಿಪೋಗೆ ಕರೆ ಮಾಡಿ ಮತ್ತೊಂದು ಸ್ಲೀಪರ್ ಬಸ್ನನ್ನು ಕರೆಸಿದ್ದಾರೆ.
ಮೊದಲ ಬಸ್‌ನಲ್ಲಿನ ಬ್ಯಾಟರಿ ಸಮಸ್ಯೆ ಸರಿಪಡಿಸಲು ಎರಡು ಬಸ್ಗಳ ನಡುವೆ ತಂತಿಗಳ ಸಹಾಯದಿಂದ ಜೋಡಿಸಿ ಸರಿಪಡಿಸಲು ಯತ್ನಿಸುತ್ತಿದ್ದಾರೆ. ಅಷ್ಟರಲ್ಲಿ ಸೂರ್ಯಪೇಟ್ ಡಿಪೋದಿಂದ ಕರೆಸಿದ್ದ ಬಸ್ನಲ್ಲಿ ಬ್ಯಾಟರಿ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಈ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಇಡೀ ಬಸ್ಗೆ ಬೆಂಕಿ ಆವರಿಸಿಕೊಂಡು ಮತ್ತೊಂದು ಬಸ್‌ಗೂ ಅದು ವ್ಯಾಪಿಸಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹಾತೋಟಿಗೆ ತಂದಿದ್ದಾರೆ. ಆದರೆ, ಎರಡೂ ಬಸ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಬೆಂಕಿಗಾಹುತಿ: ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲೂ ಇಂತಹದ್ದೆ ಅಗ್ನಿ ಅವಘಡ ಸಂಭವಿಸಿದೆ. ಮನೆಯ ಮುಂದೆ ನಿಲ್ಲಿಸಿದ್ದ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇದೇ ವೇಳೆ ಇದರ ಹಿಂದೆ ನಿಲ್ಲಿಸಿದ್ದ ಇನ್ನೊಂದು ಕಾರಿಗೂ ಸ್ವಲ್ಪ ಹಾನಿಯಾಗಿದೆ. ಇಲ್ಲಿನ ಇಲ್ಲೇಂದು ಮಂಡಲದ ಬಾಲಾಜಿ ನಗರ ಪಂಚಾಯತ್ ವಾರ್ಡ್ ಸದಸ್ಯ ಕೋಟಿ ಎಂಬುವವರಿಗೆ ಸೇರಿದ ಕಾರು ಇದಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕಾರು ಮಾಲೀಕ ಕೋಟಿ ಪೊಲೀಸರಿಗೆ ದೂರು ನೀಡಿದ್ದು, ಉದ್ದೇಶಪೂರ್ವಕವಾಗಿ ನಾಲ್ವರು ವ್ಯಕ್ತಿಗಳು ತಮ್ಮ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಇದರಿಂದ ಮುಖಂಡರ ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪಗಳು ನಡೆಯುತ್ತಿವೆ. ಇದೇ ಕಾರಣದಿಂದ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಗರ್ಭಿಣಿ ಸೇರಿ ಒಂದೇ ಕುಟುಂಬದ ನಾಲ್ವರು ಬಲಿ!