ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯ ರಾಮಮಂದಿರ ಹಾಗೂ ಎಸ್‌ಟಿಎಫ್ ಎಡಿಜಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ತಂಡವು ತಹರ್ ಸಿಂಗ್ ಮತ್ತು ಓಂಪ್ರಕಾಶ್ ಮಿಶ್ರಾ ಎಂಬುವರನ್ನು ಲಖನೌದ ಗೋಮತಿ ನಗರದ ವಿಭೂತಿ ಖಂಡ್ ಪ್ರದೇಶದಲ್ಲಿ ಬಂಧಿಸಿದೆ.
ನವೆಂಬರ್‌ನಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ನ ಖಾತೆಯೊಂದರಲ್ಲಿ ಇಬ್ಬರು ಆರೋಪಿಗಳು ಸಿಎಂ ಆದಿತ್ಯನಾಥ್, ಎಸ್‌ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್ ಮತ್ತು ನೂತನವಾಗಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದರು. ಬೆದರಿಕೆ ಪೋಸ್ಟ್‌ಗಳನ್ನು ಕಳುಹಿಸಲು ಕೆಲ ಇ-ಮೇಲ್ ಐಡಿ ಬಳಸಿರುವುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇ-ಮೇಲ್ ಐಡಿಗಳ ತಾಂತ್ರಿಕ ವಿಶ್ಲೇಷಣೆ ಬಳಿಕ, ತಹರ್ ಸಿಂಗ್ ಇ-ಮೇಲ್ ಖಾತೆಗಳನ್ನು ರಚಿಸಿದ್ದ ಮತ್ತು ಓಂಪ್ರಕಾಶ್ ಮಿಶ್ರಾ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಬಯಲಾಗಿದೆ. ಸಿಂಗ್ ಮತ್ತು ಮಿಶ್ರಾ ಇಬ್ಬರೂ ಗೊಂಡಾ ನಿವಾಸಿಗಳಾಗಿದ್ದು, ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್‌ಟಿಎಫ್ ಹೆಚ್ಚಿನ ತನಿಖೆ ನಡೆಸುತ್ತಿದೆ.