ಜಮ್ಮು ಕಾಶ್ಮೀರದ ನರ್ವಾಲದಲ್ಲಿ ಅವಳಿ ಬಾಂಬ್ ಸ್ಫೋಟ ಜಮ್ಮು ಕಾಶ್ಮೀರ:ಜಮ್ಮು ಕಾಶ್ಮೀರದಲ್ಲಿ ನರ್ವಾಲಾ ಪ್ರದೇಶದಲ್ಲಿ ಎರಡು ಕಡೆ ಬಾಂಬ್ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹೀಂದ್ರಾ ವಾಹನದ ಪಕ್ಕದಲ್ಲಿ ಮೊದಲ ಬಾಂಬ್ ಸ್ಫೋಟಗೊಂಡಿತು. ಬಳಿಕ 10 ನಿಮಿಷದಲ್ಲಿ ಇನ್ನೊಂದು ಬಾಂಬ್ ಸ್ಫೋಟಗೊಂಡಿತು. ಬಳಿಯೇ ನಡೆದು ಹೋಗುತ್ತಿದ್ದ ಐವರು ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
ಸ್ಫೋಟ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್:ನರ್ವಾಲ ಪ್ರದೇಶದಲ್ಲಿ ಅವಳಿ ಬಾಂಬ್ ಸ್ಫೋಟದಿಂದಾಗಿ ಭೀತಿ ಉಂಟಾಗಿದೆ. ಸ್ಫೋಟಗೊಂಡ ಸ್ಥಳದ ಸುತ್ತಲೂ ಪೊಲೀಸರು ಬ್ಯಾರಿಕೇಡ್ಗಳನ್ನು ಅಳವಡಿಸಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ಬುಲ್ಗಾಮ್‌ನ ಶ್ರೀನಗರ - ಬಾರಾಮುಲ್ಲಾ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತು ಬ್ಲಾಸ್ಟ್ ಆಗಿತ್ತು. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದ ಟೈಂಪಾಸ್ ಹೋಟೆಲ್ ಬಳಿಯ ಬಲ್ಗಾಮ್ ಹೈಗಮ್‌ನಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿತ್ತು. ಅದರಲ್ಲಿ ಐಇಡಿ ಸಾಗಿಸಲಾಗುತ್ತಿತ್ತು.
ಕೂಡಲೇ ಪೊಲೀಸರು ಮತ್ತು ಸೇನೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸುವ ಮೊದಲೇ ಆ ವಸ್ತು ಸ್ಫೋಟಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿರಲಿಲ್ಲ.
ಇನ್ನೊಂದೆಡೆ ಜಮ್ಮು ಕಾಶ್ಮೀರದ ಉಧಂಪುರದ ಸ್ಲಾಥಿಯಾ ಚೌಕ್ನಲ್ಲಿ ನಿಗೂಢ ವಸ್ತು ಸ್ಫೋಟಗೊಂಡು ಓರ್ವ ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದರು. ಸುಮಾರು 2 ಕಿಲೋ ಮೀಟರ್ ದೂ ಸ್ಫೋಟದ ಸದ್ದು ಕೇಳಿಸಿತ್ತು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವಾಗ ಓರ್ವ ಅಸುನೀಗಿದ್ದ. ಪ್ರಾಥಮಿಕ ತನಿಖೆಯಲ್ಲಿ ಐಇಡಿ ಸ್ಫೋಟಗೊಂಡಿತ್ತು ಎಂದು ತಿಳಿದು ಬಂದಿತ್ತು.
ಎಂಎಲ್ಎ ಮನೆ ಮೇಲೆ ಗುಂಡಿನ ದಾಳಿ:ನರ್ವಾಲಾದಲ್ಲಿ ಎರಡು ಕಡೆ ಬಾಂಬ್ ದಾಳಿ ನಡೆದಿದ್ದರೆ,ಇನ್ನೊಂದೆಡೆಲಸ್ಸಾನ ಗ್ರಾಮದ ಮಾಜಿ ಶಾಸಕ ಶ.ಚ ಮೊಹಮ್ಮದ್ ಅಕ್ರಮ್ (Surankote Sh Ch Mohd Akram) ಅವರ ಮನೆಯ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು 12 ಬೋರ್ ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಗೋಡೆ ಬಿರುಕು ಬಿಟ್ಟಿರುವ ಗುರುತು ಕಂಡು ಬಂದಿವೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳು 12 ಬೋರ್ ರೈಫಲ್‌ನಿಂದ ಗುಂಡಿನ ದಾಳಿ ನಡೆಸಿದ್ದು, ಗೋಡೆಯ ಮೇಲೆ ಸ್ಪ್ಲಿಂಟರ್ ಗುರುತುಗಳು ಉಂಟಾಗಿವೆ ಎಂದು ಪ್ರಾಥಮಿಕ ತನಿಖೆಗಳ ಮೂಲಕ ತಿಳಿದುಬಂದಿವೆ. ಹೆಚ್ಚಿನ ತನಿಖೆ ನಡೆಯುತ್ತಿವೆ. ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ. ಆದ್ರೆ ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಓದಿ:ಅಪಹರಣದ ಕಥೆಕಟ್ಟಿ ತಂದೆಗೇ 2 ಲಕ್ಷ ರೂ ಹಣದ ಬೇಡಿಕೆ ಇಟ್ಟ ಮಗ!