ನವದೆಹಲಿ/ಹೈದರಾಬಾದ್:15 ಲಕ್ಷ ಟನ್ ಅಕ್ಕಿ ಖರೀದಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. 2014 ರಲ್ಲಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ನಂತರ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಟಿಆರ್‌ಎಸ್ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದೆ.
ಟಿಆರ್‌ಎಸ್ ಪಕ್ಷದ ಸಂಸದರು, ಎಂಎಲ್‌ಸಿಗಳು, ಶಾಸಕರು, ಸಂಪುಟ ಸಚಿವರು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯತ್ ಪ್ರತಿನಿಧಿಗಳು ದೆಹಲಿಯ ತೆಲಂಗಾಣ ಭವನದಲ್ಲಿ ನಡೆಯಲಿರುವ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಟಿಆರ್‌ಎಸ್ ಸಂಸದ ಜಿ ರಂಜಿತ್ ರೆಡ್ಡಿ, ರಾಜ್ಯದಿಂದ ಕನಿಷ್ಠ ಬೆಂಬಲ ಬೆಲೆಗೆ ಅಕ್ಕಿ ಖರೀದಿಸುವಂತೆ ತೆಲಂಗಾಣ ಸರ್ಕಾರ ಮಾಡಿದ ಮನವಿಯನ್ನು ಕೇಂದ್ರ ನಿರಾಕರಿಸಿದೆ. ಈ ಹಿನ್ನೆಲೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗಿದ್ದು, ನಮ್ಮ ಹೋರಾಟ ದೆಹಲಿವರೆಗೂ ತಲುಪಿದೆ. ಪ್ರತಿಭಟನೆಯ ನೇತೃತ್ವವನ್ನು ಸಿಎಂ ವಹಿಸಲಿದ್ದು, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಕೂಡ ಧರಣಿಗೆ ಸಾಥ್ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.